ದುಬೈ:ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೂಪರ್ ಓವರ್ನಲ್ಲಿ ಭಾರತಕ್ಕೆ ಸೂಪರ್ ಗೆಲುವು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ ಕೂಡ 20 ಓವರ್ಗಳಲ್ಲಿ
5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಇದರಿಂದ ಪಂದ್ಯ ಟೈ ಆಯಿತು. ಬಳಿಕ ಪಂದ್ಯ ಸೂಪರ್ ಓವರ್ನತ್ತ ಸಾಗಿತ್ತು. ಸೂಪರ್ ಓವರ್ನಲ್ಲಿ ಭರ್ಜರಿ ಬೌಲಿಂಗ್ ಮಾಡಿದ ಹರ್ಷದೀಪ್ ಸಿಂಗ್ 5 ಎಸೆತಗಳಲ್ಲಿ ಕೇವಲ 2 ರನ್ ನೀಡಿ ಎರಡು ವಿಕೆಟ್ ಪಡೆದರು. ಇದರಿಂದ ಭಾರತಕ್ಕೆ ಗೆಲುವಿನ ಗುರಿ 3 ರನ್ ಅಯಿತು. ನಾಯಕ ಸೂರ್ಯಕುಮಾರ್ ಯಾದವ್ ಹಾಗು ಉಪನಾಯಕ ಶುಭ್ಮನ್ ಗಿಲ್ ಬ್ಯಾಟಿಂಗ್ಗೆ ಆಗಮಿಸಿದರು.ಸೂರ್ಯಕುಮಾರ್ ಮೊದಲ ಎಸೆತದಲ್ಲಿಯೇ 3 ರನ್ ಬಾರಿಸಿ ಗೆಲುವಿನ ನಗೆ ಬೀರಿದರು.
ಇದಕ್ಕೂ ಮೊದಲು 203 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಬಾರಿಸಿತು. ಶ್ರೀಲಂಕಾ ಪರ ಆರಂಭಿಕ ಬ್ಯಾಟರ್ ಪಾತುಮ್ ನಿಸಾಂಕ ಆಕರ್ಷಕ ಶತಕ ಸಿಡಿಸಿದರು. ನಿಸಾಂಕ 58 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 106 ರನ್ ಗಳಿಸಿದರು. ಕುಶಾಲ್ ಪೆರೇರ 58, ದಸುನ್ ಸನಕ 22 ರನ್ ಗಳಿಸಿ ದಿಟ್ಟ ಹೋರಾಟ ನೀಡಿದರು.
ಮೊದಲು ಬ್ಯಾಟ್ ಮಾಡಿದ ಭಾರತದ ಪರ ಮಗದೊಮ್ಮೆ ಮಿಂಚಿದ ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಸತತ ಮೂರನೇ ಅರ್ಧಶತಕದ ಸಾಧನೆ ಮಾಡಿದರು. ಮಧ್ಯಮ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ತಿಲಕ್ ವರ್ಮಾ ಸಹ ಅಜೇಯ 49 ರನ್ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.ಅಭಿಷೇಕ್ ಕೇವಲ 31 ಓವರ್ಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದರು.ಸಂಜು ಸ್ಯಾಮ್ಸನ್ 39 ಹಾಗೂ ಅಕ್ಷರ್ ಪಟೇಲ್ ಅಜೇಯ 21 ರನ್ ಗಳಿಸಿದರು. ಆದರೆ ನಾಯಕ ಸೂರ್ಯಕುಮಾರ್ ಯಾದವ್ (12), ಶುಭಮನ್ ಗಿಲ್ (4) ಹಾಗೂ ಹಾರ್ದಿಕ್ ಪಾಂಡ್ಯ (2) ವೈಫಲ್ಯವನ್ನು ಅನುಭವಿಸಿದರು.
ಏಷ್ಯಾ ಕಪ್ನಲ್ಲಿ ಅಜೇಯರಾಗಿ ಫೈನಲ್ ಪ್ರವೇಶಿಸಿರುವ ಭಾರತ ಭಾನುವಾರ ನಡೆಯಲಿರುವ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.





