ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ಸಾರಥ್ಯದಲ್ಲಿ ನಡೆದ 3ನೇ ವರ್ಷದ ‘ಸುಳ್ಯೋತ್ಸವದ ಎರಡನೇ ದಿನ ಸಾಂಸ್ಕೃತಿಕ ಸಂಭ್ರಮದಲ್ಲಿ ನವೀನ್ ಸಜ್ಜು ನೇತೃತ್ವದ ತಂಡ ಮೋಡಿ ಮಾಡಿತು.ಕನ್ನಡ ಚಲನಚಿತ್ರದ ಸಂಗೀತ ನಿರ್ದೇಶಕ ಹಾಗೂ ಗಾಯಕ ನವೀನ್ ಸಜ್ಜು ಅವರ ನೇತೃತ್ವದಲ್ಲಿ ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ಸಾಂಸ್ಕೃತಿಕ ಸಂಭ್ರಮ ನಡೆಯಿತು. ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಕಲಾವೇದಿಕೆಯಲ್ಲಿ ನಡೆದ ಎರಡನೇ ದಿನದ
ಸಾಂಸ್ಕೃತಿಕ ಸಂಭ್ರಮವನ್ನು ನೂರಾರು ಮಂದಿ ಆಗಮಿಸಿ ವೀಕ್ಷಿಸಿದರು.
ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಪ್ರಯುಕ್ತ ಸುಳ್ಯೋತ್ಸವದ ಮೊದಲ ದಿನ ಖ್ಯಾತ ಕಲಾವಿದರು,ಕಲಾ ತಂಡಗಳ ವತಿಯಿಂದ ಸಾಂಸ್ಕೃತಿಕ ಕಲಾ ವೈಭವ ಮನಸೂರೆಗೊಂಡಿತು.
ಎರಡನೇ ದಿನದ ಸಾಂಸ್ಕೃತಿಕ ವೇದಿಕೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್, ಪುತ್ತೂರು ಮುಳಿಯ ಕೇಶವ ಭಟ್ ಸನ್ಸ್ ಚಿನ್ನಾಭರಣ ಮಳಿಗೆಯ ಎಂಡಿ ಕೇಶವಪ್ರಸಾದ್ ಮುಳಿಯ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.

ಜೀವಮಾನದ ಸಾಧನೆಗಾಗಿ ಎಂ.ಬಿ.ಫೌಂಡೇಶನ್ನ ಅಧ್ಯಕ್ಷ ಎಂ.ಬಿ.ಸದಾಶಿವ ಅವರಿಗೆ ‘ಸುಳ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲರ್ಸ್ ಕನ್ನಡ ಚಾನೆಲ್ನ ನಂದಗೋಕುಲ ಧಾರವಾಹಿಯ ನಾಯಕಿ ನಟಿ ಊರ್ಜಿತಾ ವಾಲ್ತಾಜೆ ಅವರಿಗೆ ರೈಸಿಂಗ್ ಸ್ಟಾರ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಸುಳ್ಯೋತ್ಸವದ ರುವಾರಿ, ಅಕಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್.ಕೆ.ಸಿ,
ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾರ್ಯದರ್ಶಿ ಐಶ್ಚರ್ಯ.ಕೆ.ಸಿ, ಕೋಶಾಧಿಕಾರಿ ಗೌತಂ ಗೌಡ, ಸುಳ್ಯೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆರ್ಜೆ ತ್ರಿಶೂಲ್ ಕಾರ್ಯಕ್ರಮ ನಿರೂಪಿಸಿದರು.
ಅಕ್ಷಯ್ ಕೆ.ಸಿ.ಸಾರಥ್ಯದಲ್ಲಿ ಜ.3 ಮತ್ತು 4ರಂದು 3ನೇ ವರ್ಷದ ಅದ್ದೂರಿ ಸುಳ್ಯೋತ್ಸವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಖ್ಯಾತ ಕಲಾ ತಂಡಗಳಿಂದ ಸಾಂಸ್ಕೃತಿಕ ವೈಭವ ಮನಸೂರೆಗೊಂಡಿತು.










