ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ಸಾರಥ್ಯದಲ್ಲಿ 3ನೇ ವರ್ಷದ ಅದ್ದೂರಿ ‘ಸುಳ್ಯೋತ್ಸವ 2026’ ಜನವರಿ 3 ಮತ್ತು 4ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಕಲಾವೇದಿಕೆಯಲ್ಲಿ ನಡೆಯಲಿದೆ ಎಂದು ಸುಳ್ಯೋತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಪ್ರಯುಕ್ತ ನಡೆಯುವ ವಿಜೃಂಭಣೆಯ ಸುಳ್ಯೋತ್ಸವದಲ್ಲಿ ಖ್ಯಾತ ಕಲಾವಿದರು,ಕಲಾ ತಂಡಗಳ ವತಿಯಿಂದ
ಎರಡು ದಿನಗಳ ಕಾಲ ಸಾಂಸ್ಕೃತಿಕ ವೈಭವ ಮನಸೂರೆಗೊಳ್ಳಲಿದೆ ಎಂದು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುಳ್ಯೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಕೆ.ಜಿ. ತಿಳಿಸಿದ್ದಾರೆ.ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ.ಅವರ ಸಾರಥ್ಯದಲ್ಲಿ,ವಿವಿಧ ಪ್ರಾಯೋಜಕರ ಸಹಕಾರದೊಂದಿಗೆ ಆಯೋಜಿಸಲಾದ ಸುಳ್ಯೋತ್ಸವದಲ್ಲಿ ರಾಜ್ಯದ ಸುಪ್ರಸಿದ್ದ ಕಲಾ ತಂಡಗಳಿಂದ ನಾನಾ ವಿಧದ ಸಾಂಸ್ಕೃತಿಕ ಕಲಾಪ್ರಕಾರಗಳು ಎರಡೂ ದಿನಗಳಲ್ಲಿ ಪ್ರದರ್ಶನಗೊಳ್ಳಲಿದೆ.ಪ್ರತಿದಿನ ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಿಸಲಿವೆ ಎಂದು ಅವರು ವಿವರಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹಾಗೂ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಭಾಗವಹಿಸಲಿದ್ದಾರೆ.

ಸುಳ್ಯೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಲ್ಲಿಸುವುದರ ಜೊತೆಗೆ, ಜನರಿಗೆ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒದಗಿಸುವುದು ಉತ್ಸವದ ಗುರಿ.ಉಚಿತ ಪ್ರವೇಶ ನೀಡಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸತೀಶ್ ಕೆ.ಜಿ.ಹೇಳಿದರು.
ಜ.3ರಂದು ಸಂಜೆ.6ರಿಂದ ಲೋಕ ಏರಿಯಲ್ ಡಾನ್ಸ್ ತಂಡ ಬೆಂಗಳೂರು, ಸ್ವಾಹ ವಿಶುವಲ್ ಆರ್ಟ್ಸ್ ಬೆಂಗಳೂರು, ಡಿ-ಯುನೈಟೆಡ್ ಸುಳ್ಯ, ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸುಳ್ಯ, ನೃತ್ಯ ಸಾರಂಗ ಕಲಾಕುಟೀರ ಗುತ್ತಿಗಾರು ಇವರಿಂದ
ಸಾಂಸ್ಕೃತಿಕ ವೈಭವ ನಡೆಯಲಿದೆ.ಏರಿಯಲ್ ಸಿಲ್ಕ್, ಫೈರ್ ಡ್ಯಾನ್ಸ್, ಬಾಲಿವುಡ್, ಭರತನಾಟ್ಯ, ಬಲೆ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್
ನಮ್ಮ ಕಲಾವಿದೆರ್ ಬೆದ್ರ ಇವರಿಂದ ‘ವೈರಲ್ ವೈಶಾಲಿ’
ಕಾರ್ಯಕ್ರಮ ಮೂಡಿಬರಲಿದೆ. ಮಹಾನಟಿ ಖ್ಯಾತಿಯ ವಂಶಿ ಹಾಗೂ ಇತರ ತಾರೆಯರು, ಸೆಲೆಬ್ರಿಟಿ ಪರ್ಮೋರ್ಮರ್ಗಳು ಭಾಗವಹಿಸಲಿದ್ದಾರೆ. ಖ್ಯಾತ ರೇಡಿಯೋ ನಿರೂಪಕ ಆರ್ಜೆ ತ್ರಿಶೂಲ್ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಜ.4ರಂದು ಸಂಜೆ 6ರಿಂದ ಕನ್ನಡ ಚಲನಚಿತ್ರದ ಸಂಗೀತ ನಿರ್ದೇಶಕ ಹಾಗೂ ಗಾಯಕ ನವೀನ್ ಸಜ್ಜು ಅವರ ನೇತೃತ್ವದಲ್ಲಿ ಸುಮಾರು 3 ಗಂಟೆಗಳಿಗೂ ಹೆಚ್ಚು ಸಮಯ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.
ಪ್ರತಿ ವರ್ಷ ಸಂಭ್ರಮದ ಸುಳ್ಯ ಉತ್ಸವ-ಅಕ್ಷಯ್ ಕೆ.ಸಿ:
ಸುಳ್ಯೋತ್ಸವದ ರುವಾರಿ ಅಕ್ಷಯ್ ಕೆ.ಸಿ.ಮಾತನಾಡಿ
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ವೈಭವ ಇನ್ನಷ್ಟು ಹೆಚ್ಚಬೇಕು ಎಂಬ ನಿಟ್ಟಿನಲ್ಲಿ ಪ್ರತಿ ವರ್ಷ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸುಳ್ಯೋತ್ಸವವನ್ನು ವೈಭವಯುತವಾಗಿ ನಡೆಸಲು ಉದ್ದೇಶಿಸಲಾಗಿದೆ. ಈ ಹಿನ್ನಲೆಯಲ್ಲಿ

ಸಮಾನ ಮನಸ್ಕರನ್ನು ಸೇರಿಸಿ ಸುಳ್ಯೋತ್ಸವ ಸಮಿತಿಯನ್ನು ರಚಿಸಲಾಗಿದೆ ಎಂದು ವಿವರಿಸಿದರು.10ದಿನಗಳ ಕಾಲ ನಡೆಯುವ ಸುಳ್ಯ ಜಾತ್ರೆಯ ಮೆರುಗನ್ನು ಹೆಚ್ಚಿಸಲು, ಹೆಚ್ಚಿನ ಜನರು ಆಗಮಿಸುವಂತಾಗಲು, ವ್ಯಾಪಾರ, ವ್ಯವಹಾರ ಮಾಡುವವರಿಗೆ ಅನುಕೂಲವಾಗಲು ಸುಳ್ಯೋತ್ಸವ ಪೂರಕವಾಗಲಿದೆ. ಹಳ್ಳಿ ಹಳ್ಳಿಗಳಿಂದ ಇನ್ನಷ್ಟು ಜನರು ಬರುವಂತಾಗಬೇಕು ಎಂದು ಅವರು ವಿವರಿಸಿದರು. ಜೊತೆಗೆ ಜೀವಮಾನದ ಸಾಧನೆಗಾಗಿ ಒಬ್ಬರನ್ನು ಹಾಗೂ ಉದಯೋತ್ಮಕ ಪ್ರತಿಭೆ ಒಬ್ಬರನ್ನು ಆಯ್ಕೆ ಮಾಡಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಆಯ್ಕೆಯಾದವರನ್ನು ಕಾರ್ಯಕ್ರಮದಲ್ಲಿ ಘೋಷಣೆ ಮಾಡಲಾಗುವುದು ಎಂದು ಅಕ್ಷಯ್ ಕೆ.ಸಿ. ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸುಳ್ಯೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸನತ್.ಪಿ.ಆರ್, ಹರಿರಾಯ ಕಾಮತ್, ಖಜಾಂಜಿ
ಗಣೇಶ್ ಆಳ್ವ, ಪ್ರಧಾನ ಕಾರ್ಯದರ್ಶಿ ಡಾ.ಚೈತ್ರಾ ಅವಿನಾಶ್, ಜೊತೆ ಕಾರ್ಯದರ್ಶಿ,ಮಧುರಾ ಜಗದೀಶ್ ಮತ್ತು ಮಿಥುನ್ ಕಡೆಂಗ ಬಾಬುಗೌಡ
ನಿರ್ದೇಶಕರಾದ ಶೈಲೇಂದ್ರ ಸರಳಾಯ,ಅಭಿಷೇಕ್ ಕೇಕಡ್ಕ, ರಜತ್ ಅಡ್ಕಾರ್, ತೀರ್ಥೇಶ್ ಪಾರೆಪ್ಪಾಡಿ,ಕಾರ್ತಿಕ್ ಕುಡೆಕಲ್ಲು ಉಪಸ್ಥಿತರಿದ್ದರು.
















