*ಡಾ.ಸುಂದರ ಕೇನಾಜೆ.
ಸುಳ್ಯ ತಾಲೂಕು ರಚನೆಯಾಗಿ 60 ವರ್ಷಗಳಾಗಿದೆ.ಎಲ್ಲಾ ಕ್ಷೇತ್ರಗಳಲ್ಲಿ ಬೆಳೆದಂತೆ ಸಂಶೋಧನಾ ಕ್ಷೇತ್ರವೂ ಇಲ್ಲಿ ಸಾಕಷ್ಟು ಬೆಳೆದಿದೆ. ಸಂಶೋಧನಾ ಕ್ಷೇತ್ರಕ್ಕೆ, ಸಂಶೋಧಕರಿಗೆ ಸುಳ್ಯ ಸಮೃದ್ಧ ನೆಲ. 1965ರ ನಂತರ ಸುಳ್ಯ ಸಂಶೋಧನಾ ಕ್ಷೇತ್ರದಲ್ಲಿ ದೊಡ್ಡ ಬೆಳವಣಿಗೆ ಕಂಡಿದೆ. ಅದಕ್ಕೂ ಪೂರ್ವದಿಂದಲ್ಲೇ ಸುಳ್ಯ ಒಂದೆಡೆಯಿಂದ ಕೇರಳ, ಮತ್ತೊಂದು ಕಡೆಯಿಂದ ಕೊಡಗು, ಹಾಸನ, ತುಳುನಾಡಿನ ಬೆಳ್ತಂಗಡಿ, ಪುತ್ತೂರಿಗೆ ನೇರ ಸಂಪರ್ಕ ಇದ್ದು ಸಾಂಸ್ಕೃತಿಕ ಭಿನ್ನತೆಗೆ ಕಾರಣವಾದ ಪ್ರದೇಶ. ಮೂಲತಃ ಹೊಯ್ಸಳ ಬಲ್ಲಾಳರ ಸಂಪರ್ಕ ಜತೆಗೆ ಜೈನ ಬಲ್ಲಾಳ ಆಳ್ವಿಕೆ, ಕೊಡಗು ರಾಜರ ಆಳ್ವಿಕೆ, ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಬಾಂಬೆ ಮತ್ತು ಕೆನರಾ ಸಂಪರ್ಕ, ನಂತರ ಮದ್ರಾಸ್ ಆಡಳಿತ ವಿಭಾಗಕ್ಕೆ ಸೇರಿದ ಪ್ರದೇಶ ಸುಳ್ಯ. ಮೈಸೂರು ರಾಜ್ಯ ರಚನೆಯ ನಂತರ
ಹೆಚ್ಚು ಕನ್ನಡದ ಪ್ರಭಾವ ಈ ಭಾಗಕ್ಕಾಯಿತು. ಪಂಜೆ, ಗೋವಿಂದ ಪೈ, ಕೊಳಂಬೆಯಂತಹಾ ಶ್ರೇಷ್ಠ ಸಾಹಿತಿ, ಸಂಶೋಧಕರ ಪ್ರಭಾವವೂ ಕಡಿಮೆಯದ್ದಲ್ಲ.
ತಾಲೂಕು ರಚನೆಯಾಗಿ ಹತ್ತು ವರ್ಷಗಳಲ್ಲಿ ಅಂದರೆ 1976ರಲ್ಲಿ ಸುಳ್ಯದಲ್ಲಿ ಡಿಗ್ರಿ ಕಾಲೇಜು ಸ್ಥಾಪನೆ ಯಾಯಿತು. ಮತ್ತೆ ಹತ್ತು ವರ್ಷ ಅಂದರೆ 1986ರಲ್ಲಿ ಸುಬ್ರಹ್ಮಣ್ಯದಲ್ಲೂ ಡಿಗ್ರಿ ಕಾಲೇಜು, ಮತ್ತೆ ಹತ್ತು ವರ್ಷ ಬಹುಶಃ1996 ಬೆಳ್ಳಾರೆಯಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭವಾಯಿತು. ಹಾಗಾಗಿ ಅನೇಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಂಶೋಧನಾ ರಂಗದಲ್ಲಿ ಆಸಕ್ತಿ ಹೊಂದಿದವರಾದರು. ಮಂಗಳೂರು ವಿ.ವಿಯ ಪ್ರಭಾವ, ಜತೆಗೆ ಎಂಬತ್ತರ ದಶಕದಲ್ಲಿ ಆರಂಭಗೊಂಡ ಸುದ್ದಿ ಪತ್ರಿಕೆ ಸುಳ್ಯದ ಸಾಹಿತ್ಯ, ಸಂಶೋಧನೆಯನ್ನು ಬೆಳೆಸಲು ದಾರಿ ಮಾಡಿಕೊಟ್ಟಿದೆ. ಪರಿಣಾಮ ಸಾಹಿತ್ಯ, ಚರಿತ್ರೆ, ಜಾನಪದ, ಜನಾಂಗೀಯ ಅಧ್ಯಯನ, ಭಾಷಿಕ, ಕೃಷಿ ಮತ್ತು ಸ್ಥಳಗಳು, ಆರಾಧನೆಗಳ ಕುರಿತು ಸಂಶೋಧನೆಗಳು ನಡೆದಿವೆ.

ಕ್ರಮಾನುಗತವಲ್ಲದಿದ್ದರೂ ನೆನಪಾದದ್ದನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ತಕ್ಷಣಕ್ಕೆ ಎಲ್ಲವೂ ನೆನಪಾಗದೇ ಬಿಟ್ಟು ಹೋಗಿರಲೂಬಹುದು. ಸಾಹಿತ್ಯದಲ್ಲಿ ಅನೇಕರು ಕನ್ನಡ ಸಾಹಿತ್ಯ ಮತ್ತು ಪಾಶ್ಚಾತ್ಯ ಸಾಹಿತ್ಯಗಳ ಅಧ್ಯಯನ ನಡೆಸಿ ಕೃತಿ ರಚಿಸಿದ ಉದಾಹರಣೆಗಳು ಸುಳ್ಯದಲ್ಲೂ ಇವೆ. ಅದು ತಾಲೂಕು ರಚನೆಗೂ ಪೂರ್ವದ್ದು, ನಿರಂಜನರವರ ಅನೇಕ ಐತಿಹಾಸಿಕ ಕಾದಂಬರಿ ಮತ್ತು ಬರಹಗಳಿಗೆ ಸುಳ್ಯವೇ ಮೂಲ ಮತ್ತು ಅಮರ ಸುಳ್ಯದ ದಂಗೆಯ ಕುರಿತು ಮೊದಲು ಬೆಳಕು ಚೆಲ್ಲಿದವರೂ ಇವರೇ. ಅದು ಸೃಜನಶೀಲ ಸಾಹಿತ್ಯವಾದರೂ ಅದರಲ್ಲಿ ಸಂಶೋಧನೆಯ ನೆರಳಿದೆ. ಹಾಗೇ ವಿದ್ವಾನ್ ಟಿ.ಜಿ ಮುಡೂರುರವರ ಸಾಹಿತ್ಯಕ ಬರಹದಲ್ಲೂ ಕೂಡ ಕನ್ನಡ ಸಂಶೋಧನಾ ರಂಗದ ಛಾಯೆ ಇದೆ.
ಕೋಡಿ ಕುಶಾಲಪ್ಪ ಗೌಡರು ಅಂತರಾಷ್ಟ್ರೀಯ ಭಾಷಾವಿಜ್ಞಾನಿ ಭಾಷೆಯ ಕುರಿತು ಆಳವಾದ ಅಧ್ಯಯನ ಮತ್ತು ಅರೆಭಾಷೆಯ ಕುರಿತ ಅಧಿಕೃತ ಅಧ್ಯಯನ ನಡೆಸಿದವರು. ಅದು ಮುಖ್ಯವಾಗಿ ಸುಳ್ಯ ಕೇಂದ್ರತ ಸಂಶೋಧನೆ. ಜನಾಂಗೀಯ ಅಧ್ಯಯನ ಮತ್ತು ಅಕಾಡೆಮಿಕ್ ಅಧ್ಯಯನ ಶಿಸ್ತಿನ ಮೂಲಕ ಸಂಶೋಧನೆಗೆ ಹೊಸ ದಿಕ್ಕು ತೊರಿದವರು ಡಾ. ಪುರುಷೋತ್ತಮ ಬಿಳಿಮಲೆಯವರು. ಅವರ ಗೌಡ ಜನಾಂಗ ಅಧ್ಯಯನ, ಇತರ ಕೃತಿಗಳಾದ ಕರಾವಳಿ ಜಾನಪದ, ಕೂಡುಕಟ್ಟು, ಕೊರಗರು ಇವೆಲ್ಲವೂ ಅದಕ್ಕೆ ಉತ್ತಮ ಉದಾಹರಣೆಗಳು. ಎಲ್ಲವೂ ಸುಳ್ಯ ಕೇಂದ್ರತ ಸಂಶೋಧನೆಗಳು. ಪಾಲ್ತಾಡಿ ರಾಮಕೃಷ್ಣ ಅಚಾರ್ ರವರ ಸುಳ್ಯದ ಗಡಿಭಾಗದ ಪುತ್ತೂರಿನ ಪಾಲಾಡ್ತಿಯವರಾದರೂ ಅವರ ನಲಿಕೆ ಜನಾಂಗದ ಕುಣಿತಗಳ ಕುರಿತ ಅಧ್ಯಯನ ಕೂಡ ಸುಳ್ಯದ ನಲಿಕೆಯವರನ್ನು ಕೇಂದ್ರೀಕರಿಸಿ ನಡೆಸಿದ್ದಾಗಿದೆ. ಅಲ್ಲದೇ ಅವರ ಅನೇಕ ಇತರ ಸಂಶೋಧನಾ ಕೃತಿಗಳು ಕೂಡ ಸುಳ್ಯದ ಹಿನ್ನಲೆಯಲ್ಲೇ ರಚಿಸಲ್ಪಟ್ಟವುಗಳು. ಅವಳಿ ವೀರರಿಗೆ ಹೆಸರಾದ ನಾಡು ಸುಳ್ಯ. ಇಲ್ಲಿ ಬಹುತೇಕ ಎಲ್ಲಾ ಅವಳಿ ವೀರರು ಓಡಾಡಿದ್ದಾರೆ ಎನ್ನುವ ಪ್ರತೀತಿ ಇದೆ. ಅದರಲ್ಲಿ ಡಾ.ವಾಮನ ನಂದಾವರರು ಎಣ್ಮೂರಿನ ಕೋಟಿ-ಚೆನ್ನಯ ಬಗ್ಗೆ ಮೊದಲ ಜಾನಪದೀಯ ಅಧ್ಯಯನ ನಡೆಸಿದರು. ಆ ಮೂಲಕ ಮುಖ್ಯವಾಗಿ ಸುಳ್ಯದ ಬಿಲ್ಲವ ಸಮಾಜ ಮತ್ತು ಸುಳ್ಯದ ಚರಿತ್ರೆಯ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.

ಡಾ.ಸುಂದರ ನಾಯ್ಕರವರು ಸುಳ್ಯದ ಮರಾಠಿ ಜನಾಂಗವನ್ನು ಇಟ್ಟುಕೊಂಡು ಸಂಶೋಧನೆ ನಡೆಸಿದ್ದಾರೆ. ಬುಡಕಟ್ಟು ಜನಾಂಗದ ಆಚರಣೆ ಮತ್ತು ಸಾಂಸ್ಕೃತಿಕ ಹಿನ್ನಲೆಯ ಮಹತ್ವದ ದಾಖಲೆ ಇದಾಗಿದೆ. ಡಾ.ರತ್ನಾಕರ ಮಲ್ಲಮೂಲೆಯವರು ಮಣಿಯಾಣಿ ಜನಾಂಗ ಅಧ್ಯಯನದಲ್ಲಿ ಸುಳ್ಯದ ಯಾದವ ಸಮುದಾಯದ ಅಧ್ಯಯನ ನಡೆಸಿದ್ದಾರೆ. ಇದು ಹಿಂದುಳಿದ ವರ್ಗಗಳ ಸಾಂಸ್ಕೃತಿಕ ಬದುಕನ್ನು ಪ್ರತಿನಿಧಿಸುವ ಅಧ್ಯಯನ.
ಬೇರೆಬೇರೆ ಜನಾಂಗಗಳ ಕುಣಿತಗಳ ಬಗ್ಗೆ ಉಡುಪಿಯ ಆರ್. ಆರ್. ಸಿ ಯವರು ದಾಖಲೀಕರಣ ನಡೆಸಿದ್ದಾರೆ ಮತ್ತು ಅದರ ಬಗ್ಗೆ ಬಿಡಿ ಲೇಖನಗಳ, ಸಂಶೋಧನಾ ಬರೆಹಗಳೂ ಪ್ರಕಟಗೊಂಡಿವೆ. ಇನ್ನು ಕೆಲವು ಜನಾಂಗೀಯ ಅಧ್ಯಯನಗಳು ನಡೆದಿರಬಹುದು. ತಕ್ಷಣಕ್ಕೆ ನೆನಪಿಗೆ ಬರುತ್ತಿಲ್ಲ. ಆದರೆ ಇಲ್ಲಿ ಮುಗೇರ ಜನಾಂಗ, ಆದಿ ದ್ರಾವಿಡ, ಮಲೆಕುಡಿಯರ ಬಗ್ಗೆ ಸುಳ್ಯದ ಹೊರತಾದ ಸಂಶೋಧಕರು ಅಧ್ಯಯನಕ್ಕೆ ಬಳಸಿಕೊಂಡ ಉದಾಹರಣೆ ಇದೆ(ಡಾ.ಅಭಯ ಕುಮಾರ್ ಕೌಕ್ರಾಡಿ, ಕೊಯಿರಾ ಬಾಳೆಪುಣಿ ಮೊದಲಾದವರು).
ಡಾ.ಮಾಧವ ಪರಾಜೆ ದ್ರಾವಿಡ ಅಧ್ಯಯನಕ್ಕೆ ಸಂಬಂಧಿಸಿದಂತೆ ಹಂಪಿ ವಿ.ವಿಯ ದ್ರಾವಿಡ ಅಧ್ಯಯನ ವಿಭಾಗದಲ್ಲಿ ಸುಳ್ಯದ ಸಂದರ್ಭವನ್ನು ಬಳಸಿಕೊಂಡು ಅಧ್ಯಯನ ನಡೆಸಿದ್ದಾರೆ. ಡಾ.ವಿಶ್ವನಾಥ ಬದಿಕಾನರ ಅರೆಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ಕಥೆಗಳ ಅಧ್ಯಯನದಲ್ಲಿ ಸುಳ್ಯವನ್ನೇ ಪ್ರಧಾನವಾಗಿಸಿದ್ದಾರೆ. ಡಾ.ಸುಂದರ ಕೇನಾಜೆಯವರು ಭತ್ತದ ಬೇಸಾಯದ ಜಾನಪದ ಅಧ್ಯಯನದಲ್ಲಿ ಹಾಗೂ ತನ್ನ ಇತರ ಕೃತಿಗಳಾದ ನೆಲದನೆಲೆ, ಕಾಲಚಿತ್ರ, ತರವಾಡು, ತುಳು ಜನಪದ ಸಾಹಿತ್ಯ ಶಿಕ್ಷಣ, ಹಲವು ಬಿಡಿ ಲೇಖನ ಮತ್ತು ಅಂಕಣಗಳಲ್ಲಿ ಸುಳ್ಯವನ್ನೇ ಕೇಂದ್ರೀಕರಿಸಿ ಸಂಶೋಧನೆಗಳನ್ನು ನಡೆಸುತ್ತಾ ಅಲ್ಲಿಲ್ಲಿ ದಾಖಲಿಸುತ್ತಾ ಬಂದಿದ್ದಾರೆ.
ಡಾ.ಪೂವಪ್ಪ ಕಣಿಯೂರುರವರ ಉಳ್ಳಾಕು ಅಧ್ಯಯನ ಮತ್ತು ಇತರ ಕೃತಿಗಳು ಸುಳ್ಯ ಕೇಂದ್ರಿತ ಸಂಶೋಧನೆಗಳಾಗಿವೆ. ಅವರ ನಾಗರ ಮಡಿಕೆ ಕುಕ್ಕೆ ದೇವಾಲಯಕ್ಕೆ ಸಂಬಂಧಿಸಿದ ಕೃತಿ. ಡಾ.ಚಂದ್ರಶೇಖರ ದಾಮ್ಲೆಯವರ ಜಾತ್ರೆಗಳ ಕುರಿತ ಅಧ್ಯಯನ ಹಾಗೂ ಇತರ ಬರೆಹ ಸುಳ್ಯದ ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಉದಾಹರಣೆ. ಡಾ.ಪ್ರಭಾಕರ ಶಿಶಿಲರ ಅನೇಕ ಕೃತಿಗಳು ಹಾಗೂ ಅವರ ಅರ್ಥಶಾಸ್ತ್ರೀಯ ಬರೆಹಗಳಲ್ಲಿ ಈ ಭಾಗದ ಸಂಶೋಧನಾ ಪ್ರವೃತ್ತಿ ಕಾಣಬಹುದು.
ಡಾ.ಯು.ಪಿ ಶಿವಾನಂದರವರು ಪತ್ರಿಕೋಧ್ಯಮಿಯಾದರೂ ಸುಮಾರು ನಲವತ್ತು ವರ್ಷಗಳಿಂದ ಸುಳ್ಯದ ಪತ್ರಿಕೋದ್ಯಮ, ಕೃಷಿ, ರಾಜಕೀಯ ಬೆಳವಣಿಗೆಯ ಕುರಿತು ನಿರಂತರ ಬರೆಯುತ್ತಾ ಬಂದವರು. ಚಲನಾಶೀಲ ಅಧ್ಯಯನವಾಗಿ ಇವರ ಬರೆಹಗಳನ್ನು ಪರಿಗಣಿಸಬೇಕು. ಇದೊಂದು ಸಂಶೋಧನಾ ಪ್ರಕಾರವೂ ಆಗಿದೆ.
ದೇವಿಪ್ರಸಾದ್ ಸಂಪಾಜೆ ಅಮರ ಸುಳ್ಯದ ಚಾರಿತ್ರಿಕ ಮಹತ್ವದ ಬಗ್ಗೆ ಸಂಶೋಧನಾತ್ಮಕವಾಗಿ ಮೊದಲು ಬೆಳಕು ಚೆಲ್ಲಿದವರು. ಆನಂತರ ಡಾ.ವಿದ್ಯಾಧರ ಕುಡೆಕಲ್ಲುರವರು ಈ ಹೋರಾಟದ ಅನೇಕ ಹೊಸ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿ ಹಂಪಿ ವಿ.ವಿ ಯಿಂದ ಡಿಲಿಟ್ ಪದವಿ ಪಡೆದಿದ್ದಾರೆ. ಇನ್ನೂ ಅನೇಕರು ಈ ಬಗ್ಗೆ ಕೃತಿ ರಚಿಸಿದ್ದಾರೆ. ಆದರೆ ಕೊಡಗಿನ ಡಾ.ತಂಬಡ ವಿಜಯ ಪೂಣಚ್ಚರವರು ಇದರ ಕುರಿತು ಅತ್ಯಂತ ವಿಸ್ತೃತ ಮತ್ತು ಕರಾರುವಾಕ್ಕಾದ ಸಂಶೋಧನೆ ನಡೆಸಿ ಕೃತಿಯನ್ನೂ ಪ್ರಕಟಿಸಿ ಅಂತಿಮವೆಂಬಂತೆ ದಾಖಲಿಸಿದ್ದಾರೆ.ಮಂಗಳೂರಿನ ಡಾ.ಚಿನ್ನಪ್ಪ ಗೌಡರು ಭೂತಾರಾಧನೆಯ ಸಂಶೋಧನೆಯಲ್ಲಿ ಸುಳ್ಯದ ಪ್ರಮುಖ ಭೂತಾರಾಧನೆಯ ಪ್ರಕಾರವಾದ ಜಾಲಾಟವನ್ನು ಸುಳ್ಯದಿಂದ ಮಾತ್ರ ಗುರುತಿಸಿ ದಾಖಲಿಸಿದ್ದಾರೆ. ಡಾ.ಅನುರಾಧ ಕುರುಂಜಿಯವರು ಸುಳ್ಯದ ಪ್ರಮುಖ ಸಾಹಿತಿ ನಿರಂಜನರ ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇದಲ್ಲದೇ ಪ್ರಭಾಕರ ಶಿಶಿಲ, ಸುಬ್ರಾಯ ಚೊಕ್ಕಾಡಿ, ಡಾ.ರಾಮಚಂದ್ರ ದೇವ ಇವರ ಕೃತಿಗಳ ಬಗ್ಗೆಯೂ ಸಾಹಿತ್ಯಕ ಅಧ್ಯಯನಗಳು ಒಂದಷ್ಟು ನಡೆದಿವೆ. ಇನ್ನೂ ಅನೇಕ ಸಾಹಿತಿಗಳ ಕುರಿತ ಸಂಶೋಧನೆ ನಡೆಸಬಹುದು. ಡಾ.ಕೊಳಂಬೆ ಚಿದಾನಂದ ಗೌಡರು ಆಧುನಿಕ ಕಂಪ್ಯೂಟರ್ ಕ್ಷೇತ್ರದ ಬಗ್ಗೆ ಅಧ್ಯಯನ ನಡೆಸಿದವರು ಇವರ ವಸ್ತು ಸುಳ್ಯದ್ದಲ್ಲದಿದ್ದರೂ ಇವರು ಸುಳ್ಯ ಮೂಲದವರು. ಡಾ.ರೇವತಿ ನಂದನ್ ರವರ ಪಶ್ಚಿಮ ಘಟ್ಟಗಳ ಇರುವೆಗಳ ಅಧ್ಯಯನದಲ್ಲಿ ಸುಳ್ಯ ತಾಲೂಕಿನ ಇರುವೆಗಳ ವೈವಿಧಗಯತೆಗಳು ಒಳಪಟ್ಟಿದೆ. ಡಾ.ದೇವಿಪ್ರಸಾದ್ ರವರ ಸಸ್ಯ ವೈವಿಧ್ಯಗಳ ಅಧ್ಯಯನದಲ್ಲಿ ಸುಳ್ಯದ ಸಸ್ಯಗಳೂ ಅಧ್ಯಯನಕ್ಕೆ ಒಳಪಟ್ಟಿವೆ. ಎ.ಕೆ ಹಿಮಕರರವರು ಕಂದ್ರಪ್ಪಾಡಿಯ ಪುರುಷ ದೈವಗಳ ಹಿನ್ನಲೆಯ ಕೆಲವೊಂದು ಚಾರಿತ್ರಿಕ ಸಂಗತಿಗಳ ಕುರಿತು ಕೃತಿ ರಚಿಸಿದ್ದಾರೆ. ಅಲ್ಲದೇ ಚಂದ್ರಶೇಖರ ಮಂಡೆಕೋಲುರವರ ಅನ್ವೇಷಣೆ ಕೃತಿ, ದಿನೇಶ್ ಕುಕ್ಕುಜಡ್ಕ, ಭರತೇಶ್ ಅಲಸಂಡೆಮಜಲು,ಚರಣ್ ಐವರ್ನಾಡು, ಅನಿಂದಿತ್ ಗೌಡರಂತಹಾ ಸಂಶೋಧನಾ ಪ್ರವೃತ್ತಿಯ ಲೇಖಕರು ಸುಳ್ಯದ ಸಂಸ್ಕೃತಿಗೆ ಸಂಬಂಧಿಸಿದಂತೆ ಕೃತಿ, ಲೇಖನಗಳನ್ನು ಪ್ರಕಟಿಸಿದ್ದಾರೆ. ಕಳೆದ ಅವಧಿಯ ಅರೆಭಾಷಾ ಅಕಾಡೆಮಿಯ ಮಹತ್ವದ ಕೆಲಸವಾದ ಅರೆಭಾಷಾ ವಿಶ್ವಕೋಶದಲ್ಲಿ ಇಲ್ಲಿನ ಹಲವು ಸಂಶೋಧನಾ ಬರೆಹಗಳು ಪ್ರಕಟಗೊಂಡಿವೆ. ಇದಲ್ಲದೇ ಅನೇಕ ಎಂಫಿಲ್, ಪಿಎಚ್.ಡಿ ಅಧ್ಯಯನಗಳು ಮತ್ತು ಅಂತಹಾ ಸಂಶೋಧಕರಿಗೆ ಸುಳ್ಯ ಆಶ್ರಯ ಕೊಟ್ಟಿದೆ.
ಪೂಮಲೆ, ಬಂಟಮಲೆ, ಕೋಳಿಕಮಲೆ, ದೇಸಮಲೆ, ಕುಮಾರ ಪರ್ವತದ ಬಗ್ಗೆ ಬಿಡಿ ಲೇಖನಗಳ ಪ್ರಕಟಗೊಂಡಿವೆ. ಆದರೆ ಸಮಗ್ರ ಅಧ್ಯಯನ ನಡೆಯಬೇಕಾಗಿದೆ. ನಡೆಸಬಹುದು. ಸುಳ್ಯದ ಯಕ್ಷಗಾನ ಕ್ಷೇತ್ರದ ಬಗ್ಗೆ ಅಧ್ಯಯನ ನಡೆದಿದೆ, ಆದರೆ ಅದು ಕಡಿಮೆಯೇ. ಕಳೆದ 50 ವರ್ಷಗಳಲ್ಲಿ ಮತ್ತು ಅದರ ಹಿಂದಿನ ಸುಳ್ಯದ ಶೈಕ್ಷಣಿಕ ಬೆಳವಣಿಗೆಗಳ ಬಗ್ಗೆ ಒಂದಷ್ಟು ಚಾರಿತ್ರಿಕ ಸಂಚಿಕೆಗಳು, ಬಿಡಿ ಲೇಖನಗಳು, ಅಧ್ಯಯನ ವರದಿಗಳು ಪ್ರಕಟಗೊಂಡಿವೆ. ಇನ್ನೂ ಹೆಚ್ಚಿಗೆ ಸಂಶೋಧನೆ ನಡೆಯಲು ಅವಕಾಶ ಇದೆ.
ಸುಳ್ಯದ ಬಹುತೇಕ ದೇವಸ್ಥಾನ ದೈವಸ್ಥಾನಗಳಲ್ಲಿ ಎರಡೆರಡು(ಕೆಲವು ಮೂರು) ಬಾರಿ ಬ್ರಹ್ಮಕಲಶ ನಡೆದು ಸ್ಮರಣ ಸಂಚಿಕೆ ಪ್ರಕಟಿಸಿವೆ. ಕೆಲವೊಂದು ಸಂಚಿಕೆಯಲ್ಲಿ ಸಂಶೋಧನಾತ್ಮಕ ಅಂಶಗಳು ದಾಖಲಾದದ್ದೂ ಇದೆ. ಕೆಲವು ಕಡೆ ಅಷ್ಟಮಂಗಲದ ಜ್ಯೋತಿಷಿ ಹೇಳಿದ್ದನ್ನೇ ಸಂಶೋಧನೆ ಎಂದು ದಾಖಲಿಸಿದ್ದೂ ಇದೆ. ಆದರೆ ಅಕಾಡೆಮಿಕ್ ಶಿಸ್ತಿನ ಅಧ್ಯಯನಗಳು ಅಲ್ಲಿ ನಡೆಯಲೇಬೇಕು. ಸ್ಥಳನಾಮಗಳ ಬಗ್ಗೆ ಸಂಶೋಧನೆ ನಡೆದಿಲ್ಲ, ನಡೆಯುವ ಅಗತ್ಯ ಇದೆ. ಸುಳ್ಯದ ಚರಿತ್ರೆ 1837ಕ್ಕಿಂತ ಹಿಂದೆ ಹೋದದ್ದು ಬಹಳ ಕಡಿಮೆ. ಡಾ.ಚಿನ್ನಸ್ವಾಮಿ ಸೋಸಲೆಯವರ “ಕರಾವಳಿ ಕರ್ನಾಟಕದ ಜೈನ ಅರಸು ಮನೆತನಗಳು” ಎಂಬ ಕೃತಿಯಲ್ಲಿ ಇಲ್ಲಿ ಜೈನ ಬಲ್ಲಾಳರ ಬಗ್ಗೆ ಹಾಗೂ ಡಾ.ಪಾದೂರು ಗುರುರಾಜ್ ಭಟರವರು “ತುಳುವ ಹಿಸ್ಟರಿ & ಕಲ್ಚರ್” ಕೃತಿಯಲ್ಲಿ ಇಲ್ಲಿ ಪ್ರಮುಖ ದೇವಾಲಯದ ಮೂರ್ತಿ ಶಿಲ್ಪಗಳ ಬಗ್ಗೆ ಸಂಶೋಧನಾ ವಿವರಣೆ ನೀಡಿದ್ದಾರೆ. ಹಂಪಿ ವಿ.ವಿ ಪ್ರಕಟಿಸಿದ ತುಳು ಸಾಹಿತ್ಯ ಚರಿತ್ರೆ ಎಂಬ ಬೃಹತ್ ಗ್ರಂಥದಲ್ಲಿ ಸುಳ್ಯ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿಲ್ಲ, ಯಾಕೆಂದರೆ ಆ ಕಡೆ ತುಳು ಅಲ್ಲದ, ಈ ಕಡೆ ಕೊಡವ, ಕನ್ನಡ ಅಲ್ಲದ ಪ್ರದೇಶ ಸುಳ್ಯ. ಹಾಗಾಗಿ ಸುಳ್ಯದ್ದು ಸಾಹಿತ್ಯಹೀನ ಪರಂಪರೆಯೋ ಎನ್ನುವ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ.
ನವಶಿಲಾಯುಗದ ಕುರುಹುಗಳು ಸುಳ್ಯದ ಕೆಲವು ಭಾಗಗಳಲ್ಲಿ ಇದ್ದರೂ ಅಧ್ಯಯನಕ್ಕೆ ಒಳಪಟ್ಟಿಲ್ಲ. ಅಗತ್ಯ ಇದೆ. ಭೂತಾರಾಧನೆಯಲ್ಲಿ ಮಲೆಯಾಳಿ ದೈವಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕು. ನಾಗಾರಾಧನೆಗೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನದ ಅಗತ್ಯ ಇದೆ. ಸುಳ್ಯದ ಭಾಷೆ ಮತ್ತು ಭಾಷಾ ವೈವಿಧ್ಯದ ಬಗ್ಗೆ ಬಹಳ ಮಹತ್ವದ ಅಧ್ಯಯನ ಆಗಬೇಕಾಗಿದೆ.
ಕೃಷಿ ಸಂಶೋಧನೆ ಇನ್ನೂ ಹೆಚ್ಚಿಗೆ ನಡೆಯಬೇಕು. ಅದರಲ್ಲೂ ಅಡಿಕೆ ಮತ್ತಿತರ ಕೃಷಿಯ ಬಗ್ಗೆ ಬೇರೆಬೇರೆ ಆಯಾಮಗಳ ಅಧ್ಯಯನ ನಡೆಯಬೇಕು. ಪರಿಸರದ ಬಗ್ಗೆಯೂ ಸೇರಿಸಬೇಕು. ಅಭಿವೃದ್ಧಿಯ ವಿಷಯ ಬಂದಾಗ ಇದು ಮೀಸಲು ಕ್ಷೇತ್ರ ಈ ಬಗ್ಗೆ ತೌಲನಿಕ ಅಧ್ಯಯನದ ಮತ್ತು ಸೂಕ್ಷ್ಮ ಪ್ರದೇಶವಾದ ಸುಳ್ಯದ ಅಭಿವೃದ್ಧಿಯ ಮಾನದಂಡದ ಬಗ್ಗೆಯೂ ಗಂಭೀರ ಸಂಶೋಧನೆ ನಡೆಯಬೇಕು. ಕೆಲವು ಡಿಜಿಟಲ್ ಮಾಧ್ಯಮಗಳು, ಚಾನೆಲ್ಗಳು ಕೆಲವು ಸಂಶೋಧನಾತ್ಮಕ ಸ್ಟೋರಿಗಳನ್ನು ಪ್ರಕಟಿಸುವುದನ್ನೂ ಗಮನಿಸಿದ್ದೇನೆ. ಉದಾಹರಣೆಗೆ ಮೇನಾಲದ ಗುಹೆ, ಅಲ್ಲಲ್ಲಿ ನಡೆಯುವ ಜಾತ್ರೆ, ಕೋಲ, ಕ್ರೀಡೆ… ಇತ್ಯಾದಿ. ದುರ್ಗಾಕುಮಾರ್ ನಾಯರ್ ಕೆರೆ, ಹರೀಶ್ ಬಂಟ್ವಾಳ್, ಗಂಗಾಧರ ಕಲ್ಲಪ್ಪಳ್ಳಿ ಹಾಗೂ ಇನ್ನಿತರ ಕೆಲವು ಪತ್ರಕರ್ತರು ಈ ಕೆಲಸ ಮಾಡಿದ್ದಾರೆ. ಬಗ್ಗೆ ಇನ್ನೂ ವಿಸ್ತೃತ ಸಂಶೋಧನೆ ನಡೆಸಬಹುದು.
ಒಟ್ಟಿನಲ್ಲಿ ಸುಳ್ಯ ಸಂಶೋಧಕರಿಗೆ ಸಂಮೃದ್ಧ ನೆಲ.ಆಸಕ್ತ ಮತ್ತು ಸೂಕ್ತ ಮಾರ್ಗದರ್ಶನ ಮಾಡುವ ವ್ಯವಸ್ಥೆ ಮಾತ್ರ ಬೇಕಾಗಿದೆ. ಅದು ಸಿಗಲಿ ಎಂದು ಆಶಿಸುತ್ತೇನೆ. ಕೆಲವು ಹೆಸರುಗಳು ತಕ್ಷಣಕ್ಕೆ ನೆನಪಿಗೆ ಬಾರದೇ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಕ್ಷಮೆ ಇರಲಿ. ಧನ್ಯವಾದಗಳು.

(ಡಾ.ಸುಂದರ ಕೇನಾಜೆ ಅವರು ಲೇಖಕರು,ಅಂಕಣಕಾರರು ಹಾಗೂ ಜಾನಪದ ಸಂಶೋಧಕರು).













