ಸುಳ್ಯ: ಸುಳ್ಯದಲ್ಲಿ ನಿರಂತರ ಎರಡನೇ ದಿನವೂ ಭರ್ಜರಿ ಮಳೆಯಾಗಿದೆ. ಮಾ.26ರಂದು ಸಂಜೆಯ ವೇಳೆಗೆ ಗುಡುಗು ಸಹೀತ ಮಳೆಯಾಗಿದೆ. ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆ ಸುರಿದಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇದ್ದು ಸಂಜೆ 4 ಗಂಟೆಯ ವೇಳೆಗೆ ಮಳೆ ಸುರಿದಿದೆ. ಸುಳ್ಯ ನಗರದಲ್ಲಿ ಗುಡುಗು ಸಿಡಿಲಿನ
ಅಬ್ಬರದೊಂದಿಗೆ ಸುಮಾರು ಒಂಗು ಗಂಟೆಗಳಿಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿದಿದೆ. ಸುಳ್ಯ ನಗರದಲ್ಲಿ 60 ಮಿ.ಮಿ.ಮಳೆ ಸುರಿದಿದೆ ಎಂದು ಮಳೆಯ ಲೆಕ್ಕೆ ದಾಖಲಿಸುವ ಶ್ರೀಧರ ರಾವ್ ತಿಳಿಸಿದ್ದಾರೆ. ಸುಳ್ಯ, ನಗರ, ಕಲ್ಲುಗುಂಡಿ, ಮರ್ಕಂಜ, ಬೆಳ್ಳಾರೆ, ಉಬರಡ್ಕ, ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಕೆಲವೆಡೆ ಗಾಳಿಯೂ ಬೀಸಿದೆ. ಕಳೆದ ಕೆಲವು ದಿನಗಳಿಂದ ಉರಿ ಬಿಸಿಲಿನ ಮತ್ತು ವಿಪರೀತ ಸೆಕೆಯ ವಾತಾವರಣ ಇತ್ತು. ಇದೀಗ ನಿರಂತರ ಎರಡನೇ ದಿನವೂ ಉತ್ತಮ ಮಳೆಯಾಗಿರುವುದರಿಂದ ಇಳೆಗೆ ತಂಪೆರೆದಿದೆ. ಕೆಲ ದಿನಗಳ ಕಾಲ
ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕಳೆದ 4 ದಿನಗಳಿಂದ ರಾಜ್ಯದ ವಿವಿಧ ಭಾಗದಲ್ಲಿ ಮಳೆ ಸುರಿಯುತ್ತಿದೆ.