ಸುಳ್ಯ: ರಸ್ತೆ ಬದಿಯಲ್ಲಿ ಅವ್ಯವಸ್ಥೆಯ ಕಾಮಗಾರಿಯಿಂದ ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ನಡೆದಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಒಂದು ಭಾಗದಲ್ಲಿ
ಕುಡಿಯುವ ನೀರಿನ ಪೈಪ್ ಅಳವಡಿಕೆಗೆಂದು ಕಡಿದ ರಸ್ತೆ ಸರಿಯಾಗಿ ಮುಚ್ಚದೆ ಅವ್ಯವಸ್ಥೆ ಉಂಟಾಗಿದ್ದರೆ ಮತ್ತೊಂದು ಭಾಗದಲ್ಲಿ ನೀರು ಹರಿದು ಹೋಗಲೆಂದು ಕಡಿದು ಹಾಕಿದ ಕಾರಣ ಇಡೀ ಪ್ರದೇಶ
ಕೆಸರು ಗದ್ದೆಯಂತಾಗಿದ್ದು ನಡೆದಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗಿದೆ. ಚೆನ್ನಕೇಶವ ದೇವಸ್ಥಾನದ ಬಳಿಯ ಕಾಂಕ್ರೀಟ್ ರಸ್ತೆಯ ಎರಡೂ ಬದಿಗಳಲ್ಲಿ ಕಡಿದು ಹಾಕಲಾಗಿದ್ದು ಕೆಸರು ತುಂಬಿದೆ. ಅಲ್ಲಲ್ಲಿ ಹೊಂಡದಲ್ಲಿ ಕೆಸರು ತುಂಬಿದೆ. ಇಲ್ಲಿ ನಿರಂತರ ಅಪಘಾತವೂ ನಡೆಯುತ್ತಿದೆ. ಮೇ.23ರಂದು ಸಂಜೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುವ ಬೆಚ್ಚಿ ಬೀಳಿಸುವ ಸಿಸಿ ಕ್ಯಾಮರಾ ದೃಶ್ಯ ವೈರಲ್ ಆಗಿದೆ.ಚೆನ್ನಕೇಶವ ದವಸ್ಥಾನದ ಬಳಿಯಲ್ಲಿ ಒಂದು ಬದಿಯಲ್ಲಿ ಪೈಪ್ ಲೈನ್ ಕಾಮಗಾರಿಗೆಂದು ತೆಗೆದ ಹೊಂಡ ಮುಚ್ಚಿಲ್ಲ.

ಅಲ್ಲದೆ ಒಂದು ಹಂತಕ್ಕೆ ಮಣ್ಣಿನ ಬೆಡ್ ಮೇಲೆ ವಾಹನಗಳು ಸುಗಮವಾಗಿ ಸಂಚರಿಸುತ್ತಿದ್ದಾಗ ಇನ್ನೊಂದು ಬದಿಯಲ್ಲಿ ಮಳೆಯಲ್ಲಿಯೇ ಅಗೆದು ದೊಡ್ಡ ಹೊಂಡಗುಂಡಿಗಳನ್ನು ಎತ್ತರ ತಗ್ಗುಗಳನ್ನು ಮಾಡಿದ್ದಾರೆ. ಸಂಚಾರ ದುಸ್ತರವಾಗಿದ್ದ ಈ ಸಂದರ್ಭದಲ್ಲಿ ರಸ್ತೆಯ ಇನ್ನೊಂದು ಬದಿಯನ್ನು ಸಣ್ಣ ಕಾಮಗಾರಿಗೋಸ್ಕರ ಜಡಿ ಮಳೆಯಲ್ಲಿ ಅಗೆದು ಹೊಂಡ ಮಾಡಿ ಮಣ್ಣಿನಡಿಯಲ್ಲಿ ಇದ್ದಂತಹ ಕೇಬಲನ್ನು ಕಟ್ ಮಾಡಿ ಹಾಕಲಾಗಿದೆ. ಇದರಿಂದ ಎರಡೂ ಕಡೆ ಮಣ್ಣು ಕೆಸರು ತುಂಬಿ,ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆ ರಸ್ತೆ ಹೊಳೆಯಂತಾಗಿರುತ್ತದೆ.ಇದರ ಮಧ್ಯೆ ಅಪ್ಪಿ ತಪ್ಪಿ ರಸ್ತೆಯಿಂದ ಕೆಳಗಿಳಿದ ವಾಹನಗಳ ಚಕ್ರಗಳು ಹೂತು ಹೋಗುತ್ತಿದೆ.ಅಲ್ಲದೆ ವಿಪರೀತ ವಾಹನ ದಟ್ಟಣೆಯೂ ಆಗುತ್ತಿದೆ.

ಜನಪ್ರತಿನಿಧಿಗಳು ಭೇಟಿ:
ರಸ್ತೆಯ ಅವ್ಯವಸ್ಥೆಯ ಬಗ್ಗೆ ‘ಸುಳ್ಯ ಮಿರರ್’ ಸೇರಿ ಆನ್ಲೈನ್ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಹಿನ್ನಲೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ನಗರ ಪಂಚಾಯತ್ ಸದಸ್ಯರಾದ ಕಿಶೋರಿ ಶೇಟ್, ರಿಯಾಝ್ ಕಟ್ಟೆಕ್ಕಾರ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
