ಸುಳ್ಯ: ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಉತ್ತಮ ಮಳೆ ಮುಂದುವರಿದಿದೆ. ಹಗಲಿನ ವೇಳೆ ಮಳೆಯಾಗಿದ್ದು ರಾತ್ರಿಯೂ ಮಳೆ ಮುಂದುವರಿದಿದೆ.ಮಧ್ಯಾಹ್ನ ನಂತರ 3 ಗಂಟೆಯ ಬಳಿಕ ಕೆಲವಡೆ ಸುಮಾರು ಅರ್ಧ ಗಂಟೆಗಳ ಕಾಲ ಉತ್ತಮ ಮಳೆಯಾಗಿದೆ.ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಕೆಲವೆಡೆ ಉತ್ತಮ
ಮಳೆಯಾದರೆ ಕೆಲವೆಡೆ ಸಾಮಾನ್ಯ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ರಾತ್ರಿ 9 ಗಂಟೆಯ ಬಳಿಕ ನಿರಂತರ ಮಳೆ ಸುರಿದಿದೆ.
ಎ.2ರಂದು ಕೂಡ ಸುಳ್ಯ ತಾಲೂಕಿನ ಕೆಲವೆಡೆ ಮಳೆ ಸುರಿದಿತ್ತು. ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿದ್ದ ಸುಳ್ಯದಲ್ಲಿ ಕಳೆದ 15 ದಿನಗಳಲ್ಲಿ ವಿವಿಧ ದಿನ ಮಳೆ ಸುರಿದ ಕಾರಣ ಇಳೆಗೆ ತಂಪೆರೆದಿದೆ. ಬತ್ತಿ ಬರಡಾಗಿದ್ದ ಹೊಳೆಗಳು, ನದಿಗಳಲ್ಲಿ ಮತ್ತೆ ನೀರಿನ ಹರಿವು ಆರಂಭಗೊಂಡಿದ್ದು ಜೀವಕಳೆ ಬಂದಿದೆ. ಬರಡಾಗಿದ್ದ ನದಿ, ಹೊಳೆಗಳ ಒಡಲು ಮತ್ತೆ ನೀರು ತುಂಬಿಕೊಳ್ಳುತಿದೆ. ಕಳೆದ ಹಲವಾರು ದಿನಗಳಿಂದ ಬತ್ತಿ ಬರಡಾಗಿ ಕಲ್ಲುಗಳೇ ಪ್ರತ್ಯಕ್ಷವಾಗುತ್ತಿದ್ದ, ಮೈದಾನದಂತೆ ಭಾಸವಾಗಿದ್ದ ಸುಳ್ಯದ ವಿವಿಧ ಹೊಳೆಗಳಲ್ಲಿ ಜೀವಜಲ ಹರಿದಿದೆ. ಕಳೆದ ವಾರ ಮೂರು ದಿನಗಳ ಕಾಲ ಎಲ್ಲೆಡೆ ವ್ಯಾಪಕ ಮಳೆಯಾಗಿತ್ತು. ಬಿಸಿಲಿನ ಝಳ, ಏರಿದ ಉಷ್ಣಾಂಶದಿಂದ ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದೀಗ ಉತ್ತಮ ಮಳೆ ಬಂದಿರುವ ಕಾರಣ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.