ಸುಳ್ಯ:ಇಲೆಕ್ಟ್ರಾನಿಕ್ಸ್ನಿಂದ ಡಿಜಿಟಲ್ಗೆ ಮಾಧ್ಯಮ ಕ್ಷೇತ್ರ ಅತ್ಯಂತ ವೇಗವಾಗಿ ಬದಲಾವಣೆ ಆಗಿದೆ. ಆ ವೇಗಕ್ಕೆ ತಕ್ಕಂತೆ ಪತ್ರಕರ್ತರು ತಯಾರಾಗಬೇಕು.ಡಿಜಿಟಲ್ ಯುಗಕ್ಕೆ ಬೇಕಾದ ರೀತಿಯಲ್ಲಿ ಪತ್ರಕರ್ತರು ಬದಲಾಗಿದ್ದಾರಾ ಎಂಬ ವಿಮರ್ಶೆ ಆಗಬೇಕಾಗಿದೆ ಎಂದು ದ.ಕ.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕನ್ನಡ ಭವನದಲ್ಲಿ ಜು.10ರಂದು ನಡೆದ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ಮಾಧ್ಯಮಗಳ ಪಾತ್ರ ಮಹತ್ವದ್ದು.ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಸತ್ಯ,ಧರ್ಮ, ನ್ಯಾಯದ ಆಧಾರದಲ್ಲಿ, ಪ್ರಜಾಪ್ರಭುತ್ವದ ಮಹತ್ವ ಅರಿತು ಬದುಕುವವರು. ಪತ್ರಕರ್ತರು ಕೂಡ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.ಯಾವುದೇ ವೃತ್ತಿ ಫ್ಯಾಷನೇಟ್ ಆಗಬೇಕು. ಫ್ಯಾಷನೇಟ್ ಆಗಿ ಕೆಲಸ ಮಾಡಿದರೆ ಯಶಸ್ವಿ ಆಗುತ್ತಾರೆ. ಭಾರತ ವಿಶ್ವದ ಶಕ್ತಿಯಾಗಿ ಬೆಳೆಯುವ ಸಂದರ್ಭದಲ್ಲಿ ಸಮಾಜಕ್ಕೆ ಕನ್ನಡಿಯಾಗಬಲ್ಲ ರೀತಿಯಲ್ಲಿ ಕೆಲಸ ಮಾಡಿ. ಸತ್ಯ, ನ್ಯಾಯ, ಗೆಲ್ಲಲು ಮಾಧ್ಯಮಗಳು ಸಾಥ್ ನೀಡಿ, ಯಾವುದೇ ಹಿನ್ನಲೆ ಇಲ್ಲದವರನ್ನು ಸಮಾಜದ ಮುನ್ನಲೆಗೆ ತಂದು ಮುನ್ನಡೆಸುವ ಕೆಲಸ ಮಾಡುವುದರ ಜೊತೆ ಮಾಧ್ಯಮ ಕ್ಷೇತ್ರ ಸ್ವಯಂ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಸತ್ಯವನ್ನು ಮಾತ್ರ ಪ್ರಕಟಿಸಿ- ಭಾಗೀರಥಿ ಮುರುಳ್ಯ:
ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಮಾಧ್ಯಮಗಳು ಸಮಾಜದ ಕನ್ನಡಿ.ಸತ್ಯವನ್ನೇ ಬರೆಯಬೇಕು, ವಿಚಾರಗಳನ್ನು ಪರಾಂಬರಿಸಿ ಬರೆದು ಸತ್ಯವನ್ನು ಮಾತ್ರ ಅನಾವರಣ ಮಾಡಬೇಕು ಎಂದು ಹೇಳಿದರು. ಗ್ರಾಮ ವಾಸ್ತವ್ಯದ ಮೂಲಕ ಗ್ರಾಮೀಣ ಭಾಗದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದೀರಿ. ಗ್ರಾಮೀಣ ಭಾಗದ ನೈಜ ಸಮಸ್ಯೆಗಳನ್ನು ತೆರೆದಿಡಲು ಇದರಿಂದ ಸಾಧ್ಯವಾಗಿದೆ ಎಂದರು.
ಪಾಸಿಟಿವ್ ಸುದ್ದಿ ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆ:ಕುಟ್ಟಪ್ಪ
ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ, ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಮಾಹಿತಿಯ ಕೊರತೆಯಿಂದ, ಗ್ರಹಿಕೆಯ ಕೊರತೆಯಿಂದ ಸುದ್ದಿಗಳು ತಪ್ಪಾಗಿ ಪ್ರಕಟವಾಗದಂತೆ ಮಾಧ್ಯಮಗಳು ಜಾಗ್ರತೆ ವಹಿಸಬೇಕು.ಹೀಗಾದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವಂತಹ ಸನ್ನಿವೇಶ ಬಂದೊದಗಬಹುದು. ಸುದ್ದಿ ಪ್ರಕಟದ ವೇಳೆ ಈ ನಿಟ್ಟಿನಲ್ಲಿ ವರದಿಗಾರರು ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಅವಕಾಶ, ಅಧಿಕಾರ, ಸ್ವಾರ್ಥಕ್ಕೆ ಮಹತ್ವ ಕೊಡುವ ಜನರೇ ಸಮಾಜದಲ್ಲಿ ತುಂಬಿದರೂ ಸಮುದಾಯದ ನಡುವೆ, ಧರ್ಮಗಳ ನಡುವೆ
ಪ್ರೀತಿ ಸ್ಪುರಿಸುವ ಕೆಲಸದಲ್ಲಿ ಮಾಧ್ಯಮಗಳು ತೊಡಗಬೇಕಾದ ಅನಿವಾರ್ಯತೆ ಇದೆ ಎಂದರು.ಸಮಾಜ ಬಯಸಿದನ್ನೆ ಮಾಧ್ಯಮ ಕೊಟ್ಟರೆ ಉತ್ತಮ ಸಮಾಜ ಕಟ್ಟಲು ಸಾಧ್ಯವಿಲ್ಲ. ಆದುದರಿಂದ ಸಮಾಜವನ್ಬು ಉತ್ತಮವಾದ ವಿಚಾರಗಳೆಡೆಗೆ ಕರೆ ತರಬೇಕಾದ,ಪಾಸಿಟಿವ್ ಸುದ್ದಿ ನೀಡುವ ಮೂಲಕ ಬದಲಾವಣೆ ಮಾಡಬೇಕಾದ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು.ಆಯಾ ಪ್ರದೇಶದ ಸ್ಥಳೀಯ ಸಮಸ್ಯೆಗಳಿಗೆ ಒತ್ತು ಕೊಡದೆ, ಯಾವುದೋ ವಿಷಯಗಳಿಗೆ ಆದ್ಯತೆ ನೀಡುವುದನ್ನು ಮಾಧ್ಯಮಗಳು ಬಿಡಬೇಕು.
ನಾವು ಆತ್ಮ ವಿಮರ್ಶೆ ಮಾಡುವ ಕಾಲ ಬಂದಿದೆ. ಮುಕ್ತ ಮನಸ್ಸಿನಿಂದ ಎಲ್ಲರನ್ನೂ ಸಮಾನಾಗಿ ಕಾಣುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಿಶಿಷ್ಟ ಪರಿಕಲ್ಪನೆ ಗ್ರಾಮ ವಾಸ್ತವ್ಯ. ಸುಳ್ಯ ತಾಲೂಕಿನ ಮಡಪ್ಪಾಡಿ, ಕೊಲ್ಲಮೊಗ್ರ ಸೇರಿ 5 ಗ್ರಾಮ ವಾಸ್ತವ್ಯ ನಡೆಸಲಾಗಿದೆ. ಮಡಪ್ಪಾಡಿಯಲ್ಲಿ ಮಾದರಿಯಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾಗಿದೆ. ಹಲವು ಗ್ರಾಮಗಳಿಂದ ಗ್ರಾಮ ವಾಸ್ತವ್ಯ ಮಾಡಿ ಎಂಬ ಬೇಡಿಕೆ ಬರ್ತಾ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜೆ. ಕೆ ರೈ ದಂಪತಿಯನ್ನು ಸನ್ಮಾನಿಸಲಾಯಿತು.ಪತ್ರಿಕಾ ದಿನಾಚರಣೆ ಪ್ರಯುಕ್ತ ಪ್ರೌಢ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಪ್ರಬಂಧ ಹಾಗೂ ಭಾಷಣ ಸ್ಪರ್ಧಾ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕಲ್ನಾರು ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹಿರಿಯ ಪತ್ರಕರ್ತ ಜಯಪ್ರಕಾಶ್ ಕುಕ್ಕೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪ್ರಜ್ಞಾ ಎಸ್. ನಾರಾಯಣ ಅಚ್ರಪ್ಪಾಡಿ ಸ್ವಾಗತಿಸಿದರು.ಕಾರ್ಯದರ್ಶಿ ತೇಜೇಶ್ವರ ಕುಂದಲ್ಪಾಡಿ ವಂದಿಸಿದರು. ಗೌರವಾಧ್ಯಕ್ಷ ದಯಾನಂದ ಕೊರತ್ತೋಡಿ ಕಾರ್ಯಕ್ರಮ ನಿರೂಪಿಸಿದರು.