ಸುಳ್ಯ:ವಿಶ್ವ ಹಿಂದೂ ಪರಿಷತ್, ಬಜರಂಗದಳ,ಮಾತೃ ಶಕ್ತಿ ದುರ್ಗಾ ವಾಹಿನಿ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ 12ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಇಂದು ಸುಳ್ಯದ
ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಮೊಸರುಕುಡಿಕೆ ಉತ್ಸವ ಗೋಪುರ ಮೊಸರು ಕುಡಿಕೆ ಮತ್ತು ಧಾರ್ಮಿಕ ಸಭೆಯೊಂದಿಗೆ ಅದ್ದೂರಿಯಾಗಿ ಜರುಗಲಿದೆ.ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಆರಂಭಗೊಳ್ಳುವ ಮೊಸರು ಕುಡಿಕೆ ಉತ್ಸವದ ಶೋಭಾ ಯಾತ್ರೆಗೆ ಅ.2ಕ್ಕೆ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಚಾಲನೆ ನೀಡಲಿದ್ದಾರೆ. ಬಳಿಕ ನಗರದ ವಿವಿಧ ಭಾಗಗಳಲ್ಲಿ ಅಳವಡಿಸಿದ ಅಟ್ಟಿ ಮಡಿಕೆಗಳನ್ನು ಯುವಕರ ತಂಡ ಆಕರ್ಷಕ ಶೋಭಾಯಾತ್ರೆಯ ಮೂಲಕ ಒಡೆಯಲಾಗುತ್ತದೆ. ಸಂಜೆ ನಡೆಯುವ

ಸಮಾರೋಪ ಸಮಾರಂಭದಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕರಾದ ಚಂದ್ರಶೇಖರ ತಳೂರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ದೈವ ನರ್ತಕ ನರಸಿಂಗ ಪರವ ಸೋಣಂಗೇರಿ,ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ವಿಶ್ವ ಹಿಂದು ಪರಿಷತ್ ಪುತ್ತೂರು ಜಿಲ್ಲೆಯ ಸಹಕಾರ್ಯದರ್ಶಿ ಪ್ರಮೋದ್ ಕಡಬ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ನ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಳ್ಕರ್ ಹಾಗೂ ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾರ್ ತಿಳಿಸಿದ್ದಾರೆ.






