ಸುಳ್ಯ:ಅಕ್ರಮ ಸಕ್ರಮಕ್ಕೆ ಸಲ್ಲಿಸಿದ ಅರ್ಜಿಗಳನ್ನು ಅಕ್ರಮ ಸಕ್ರಮ ಸಮಿತಿಯ ಮುಂದೆ ಬಾರದೆ ಯಾವುದೇ ಕಾರಣಕ್ಕೂ ತಿರಸ್ಕರಿಸಬೇಡಿ, ಅಕ್ರಮ ಸಕ್ರಮ ಸಮಿತಿಯಲ್ಲಿ ಚರ್ಚಿಸಿದ ಬಳಿಕವಷ್ಟೇ ವಿಲೇವಾರಿ ಮಾಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ತಹಶಿಲ್ದಾರ್ ಅವರಿಗೆ ಸೂಚಿಸಿದ್ದಾರೆ. ಸುಳ್ಯ ತಾಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಳ್ಯ ತಾಲೂಕಿನಲ್ಲಿ ಅಕ್ರಮ ಸಕ್ರಮ ಸಭೆಗಳು ನಡೆಯುತ್ತಿಲ್ಲ, ಸಲ್ಲಿಸಲಾದ ಅರ್ಜಿಗಳನ್ನು
ಸಮಿತಿ ಮುಂದೆ ಬಾರದೇ ತಿರಸ್ಕಾರ ಮಾಡಲಾಗುತಿದೆ ಎಂದು ಕೆಡಿಪಿ ಸದಸ್ಯರಾದ ಅಶ್ರಫ್ ಗುಂಡಿ, ಧರ್ಮಪಾಲ ಕೊಯಿಂಗಾಜೆ, ಜಯಪ್ರಕಾಶ್ ನೆಕ್ರಪ್ಪಾಡಿ ಮತ್ತಿತರರು ಸಭೆಯ ಗಮನಕ್ಕೆ ತಂದರು.ಈ ಕುರಿತು ಚರ್ಚೆ ನಡೆದು ಅಕ್ರಮ ಸಕ್ರಮ ಸಮಿತಿಯ ಮುಂದೆ ಬಾರದೆ, ಕೂಲಂಕುಷವಾಗಿ ಪರಿಶೀಲನೆ ಮಾಡದೆ ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ಶಾಸಕರು ಹೇಳಿದರು. ಅಕ್ರಮ ಸಕ್ರಮ, 94ಸಿ ಅರ್ಜಿ ವಿಲೇವಾರಿ ಮಾಡುವಾಗ ಬಡವರಿಗೆ ಅನ್ಯಾಯ ಆಗಬಾರದು ಎಂದು ಅವರು ಹೇಳಿದರು. ಕಡಬ ತಾಲೂಕಿನಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆ ನಡೆಯುತ್ತದೆ. ಸುಳ್ಯದಲ್ಲಿ

ಯಾಕೆ ಆಗುತ್ತಿಲ್ಲ ಎಂದು ಸದಸ್ಯರು ಪ್ರಶ್ನಿಸಿದರು. ಶಾಸಕರ ದಿನಾಂಕ ಗೊತ್ತುಪಡಿಸಿ ಸಭೆ ಕರೆಯುವುದಾಗಿ ತಹಶೀಲ್ದಾರ್ ಮಂಜುಳ ಹೇಳಿದರು.3500 ಅಕ್ರಮ ಸಕ್ರಮ ಅರ್ಜಿಗಳು ಸಲ್ಲಿಕೆಯಾಗಿದ್ದು 1700 ಅರ್ಜಿಗಳು ತಿರಸ್ಕೃತಗೊಂಡಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕಾಮಗಾರಿ ಆದಷ್ಟು ಬೇಗ ಪೂರ್ತಿ ಮಾಡುವಂತೆ ಶಾಸಕರು ಸೂಚಿಸಿದರು. ಅಂಬೇಡ್ಕರ್ ಭವನ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಚರ್ಚೆ ನಡೆಯಿತು. ಕಾಮಗಾರಿಯು ನಿರ್ಮಿತಿ ಕೇಂದ್ರದಿಂದ

ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಆಗಿದ್ದು ಕಾಮಗಾರಿ ಪೂರ್ತಿಗೊಳಿಸಲು 5.5 ಕೋಟಿಯ ಅಂದಾಜು ಪಟ್ಟಿ ತಯಾರಿಸಲಾಗಿದೆ. ಅನುದಾನ ಬಿಡುಗಡೆಗೆ ಸಂಬಂಧಪಟ್ಟ ಸಚಿವರಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದು ಶಾಸಕರು ತಿಳಿಸಿದರು. ಸುಳ್ಯದಲ್ಲಿ ಒಂದಂಕಿ ಲಾಟರಿ ದಂಧೆ ನಡೆಯುತ್ತಿದ್ದು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಹೇಳಿದರು. ಈ ಕರಿತು ಪೋಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ,
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ತಹಶೀಲ್ದಾರ್ ಮಂಜುಳ.ಎಂ, ಕೆ.ಡಿ.ಪಿ.ಸದಸ್ಯರಾದ ಅಶ್ರಫ್ ಗುಂಡಿ, ಧರ್ಮಪಾಲ ಕೊಯಿಂಗಾಜೆ, ಜಯಪ್ರಕಾಶ್ ನೆಕ್ರಪ್ಪಾಡಿ, ತೀರ್ಥರಾಮ ಜಾಲ್ಸೂರು, ಶಕುಂತಲಾ ನಾಗರಾಜ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡರು.