ಸುಳ್ಯ: ಸುಳ್ಯದಿಂದ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಕಾರು, ಕಡಮಕಲ್ಲಿಗೆ ನೂತನ ಬಸ್ ಸಂಚಾರ ಆರಂಭಗೊಂಡಿದೆ. ಪೂ. 11.15ಕ್ಕೆ ಸುಳ್ಯದಿಂದ ಹೊರಡುವ ಬಸ್ 12.45ಕ್ಕೆ ಕಡಮಕಲ್ಲು ತಲುಪಲಿದೆ. 1.30ಕ್ಕೆ ಅಲ್ಲಿಂದ ಹೊರಡುವ ಬಸ್ 3 ಗಂಟೆಗೆ ಸುಳ್ಯ ತಲುಪಲಿದೆ. ಇತ್ತೀಚೆಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕೊಲ್ಲಮೊಗ್ರದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ
ಕಲ್ಮಕಾರು ಭಾಗಕ್ಕೆ ಹಗಲಿನ ವೇಳೆ ಹೆಚ್ಚು ಬಸ್ ಸಂಚಾರ ಒದಗಿಸಬೇಕು, ಕಲ್ಮಕಾರ್ ತನಕ ಮಾತ್ರ ಬರುತ್ತಿದ್ದ ಬಸ್ ಕಡಮಕಲ್ಲುವರೆಗೆ ಬಸ್ ವಿಸ್ತರಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕೂಡಲೇ ಸ್ಥಳದಲ್ಲಿದ್ದ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದ್ದರು. ಹೊಸ ಬಸ್ ರೂಟ್ ಒದಗಿಸಬೇಕು ಎಂದು ಸಾರ್ವಜನಿಕರು ಕೂಡ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ಕಲ್ಮಕಾರ್ ತನಕ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಕಳೆದ ವಾರ ಕಡಮಕಲ್ಲು ವರೆಗೂ ತನ್ನ ಸಂಚಾರ ವಿಸ್ತರಿಸಿತ್ತು. ಇದೀಗ
ಹೊಸ ಬಸ್ ಸಂಚಾರ ಕೂಡ ಆರಂಭಿಸಿರುವುದರಿಂದ ಗ್ರಾಮೀಣ ಭಾಗದ ಜನರ ಸಂಚಾರ ಸಮಸ್ಯೆಗೆ ಮುಕ್ತಿ ದೊರೆಯಲಿದೆ.
ಸುಳ್ಯದಿಂದ ಕಲ್ಮಕಾರ್ ಬಸ್ ವೇಳಾಪಟ್ಟಿ:
ಸುಳ್ಯದಿಂದ ಕಲ್ಮಕಾರು ಕಡಮಕಲ್ಲಿಗೆ ಸುಳ್ಯದಿಂದ ಪೂ.7.45, 9.30,11.15 ಅಪರಾಹ್ನ:1.30, 3.30, 5.00, 6.30ಕ್ಕೆ ಬಸ್ ಹೊರಡುತ್ತದೆ.









