ಸುಳ್ಯ:ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶನಿವಾರ ರಾತ್ರಿ ಶ್ರೀ ಚೆನ್ನಕೇಶವ ದೇವರ ವೈಭವದ ಬ್ರಹ್ಮರಥೋತ್ಸವ ನಡೆಯಿತು. ಭಕ್ತಿ ಸಂಭ್ರಮದಲ್ಲಿ ನಡೆದ ವೈಭವದ ರಥೋತ್ಸವವನ್ನು ನೆರೆದ ಭಕ್ತ ಸಮೂಹ ಭಕ್ತಿ ಭಾವದಿಂದ ಕಣ್ತುಂಬಿಕೊಂಡರು. ಸಾವಿರಾರು ಮಂದಿ ಭಕ್ತರ ಕಂಠದಿಂದ ಹೊರ ಹೊಮ್ಮಿದ
ಚೆನ್ನಕೇಶವನಿಗೆ ಗೋವಿಂದ.. ಗೋವಿಂದ.. ಜಯ ಘೋಷದ
ಮಧ್ಯೆ ಬ್ರಹ್ಮ ರಥೋತ್ಸವ ಸಂಪನ್ನಗೊಂಡಿತು. ದೇವಸ್ಥಾನಕ್ಕೆ ಕಲ್ಕುಡ ಭಂಡಾರ ಆಗಮಿಸಿದ ಬಳಿಕ ವಿಶೇಷ ಪೂಜೆ ಮತ್ತು ಉತ್ಸವ ಬಲಿ ನಡೆದು ಚೆನ್ನಕೇಶವ ದೇವರನ್ನು ರಥದಲ್ಲಿ ಕುಳ್ಳಿರಿಸಲಾಯಿತು. ರಥದಲ್ಲಿ ವಿಶೇಷ ಪೂಜೆಯ ಬಳಿಕ ರಥವು ರಥಬೀದಿಯಲ್ಲಿ ಸಾಗಿತು. ಕಲ್ಕುಡ ದೈವ ಮತ್ತು ಕಾನತ್ತಿಲ ದೈವಗಳೂ ರಥದ ಜೊತೆಯಲ್ಲಿ ಆಗಮಿಸಿದವು. ಸಾವಿರಾರು ಭಕ್ತರ ಮುಗಿಲು ಮುಟ್ಟಿದ ಜಯ ಘೋಷದ ಉದ್ಘಾರದ ಮಧ್ಯೆ

ಝಗಮಗಿಸುವ ವಿದ್ಯುತ್ ದೀಪಾಲಂಕಾರ ಪ್ರಭೆಯಲ್ಲಿ ವೈಭವೋಪೇತವಾಗಿ ರಥಬೀದಿಯಲ್ಲಿ ಸಾಗಿ ಬಂದ ರಥವು ಮುಖ್ಯ ರಸ್ತೆಯ ದ್ವಾರದ ಬಳಿಯ
ರಥೋತ್ಸವ ಕಟ್ಟೆಯ ಬಳಿಗೆ ಆಗಮಿಸಿತು. ಚೆನ್ನಕೇಶವ ದೇವರನ್ನು ರಥದಿಂದ ಇಳಿಸಿ ಶೃಂಗರಿಸಿದ್ದ ಕಟ್ಟೆಯಲ್ಲಿ ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.ಪೂಜೆ ನಡೆದು ಪ್ರಸಾದ ವಿತರಿಸಿದ ಬಳಿಕ ದೇವರು ರಥದಲ್ಲಿ ದೇವಾಲಯಕ್ಕೆ ಹಿಂತಿರುಗಿತು. ಸುಳ್ಯದ ಒಡೆಯ ಶ್ರೀ ಚೆನ್ನಕೇಶವನ
ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ನಡೆದ ವರ್ಣ ವೈಭವದ ರಥೋತ್ಸವವನ್ನು ಊರ ಹಾಗೂ ಪರವೂರಿನಿಂದ ಆಗಮಿಸಿದ ಸಹಸ್ರಾಸರು ಮಂದಿ ಕಣ್ತುಂಬಿಕೊಂಡರು.













