ಸುಳ್ಯ:ಬಿಜೆಪಿ ಸರಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯಿದೆ, ಮತಾಂತರ ನಿಷೇಧ ಕಾಯಿದೆ ಹಿಂಪಡೆಯಲು ನಿರ್ಧರಿಸಿರುವುದು ಹಾಗೂ ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಲು ಕಾಂಗ್ರೆಸ್ ಸರಕಾರ ಮುಂದಾಗಿರುವುದು ಖಂಡನೀಯ ಎಂದು ಸುಳ್ಯ ಬಿಜೆಪಿ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ’ ಎಪಿಎಂಸಿ ಕಾಯಿದೆಯಿಂದ ಸಣ್ಣ ರೈತರಿಗೆ
ಅನುಕೂಲ ಆಗಿತ್ತು, ದಲ್ಲಾಳಿಗಳನ್ನು ದೂರ ಮಾಡಿತ್ತು. ಆದರೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆದರೆ ದಲ್ಲಾಳಿಗಳಿಗೆ ಮತ್ತೆ ಅವಕಾಶ ನೀಡಿದಂತಾಗುತ್ತದೆ.ಮತಾಂತರ ನಿಷೇಧ ಕಾಯಿದೆ ಹಿಂಪಡೆಯುವ ಮೂಲಕ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತಿದೆ ಎಂದ ಅವರು ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತಿದೆ, ರಾಷ್ಟ್ರೀಯ ವಿಚಾರಧಾರೆಗಳನ್ನು ಪಠ್ಯಪುಸ್ತಕದಿಂದ ತೆಗೆದು ಹಾಕಿರುವುದು ಸರಿಯಲ್ಲ ಎಂದು ಆರೋಪಿಸಿದರು. ಈ ಕಾಯಿದೆಗಳನ್ನು ಹಿಂಪಡೆದರೆ ಬಿಜೆಪಿ ವತಿಯಿಂದ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಹೇಳಿದರು. ಐದು ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಹಲವು ಷರತ್ತುಗಳನ್ನು ವಿಧಿಸಿ ಅದರ ಅನುಷ್ಠಾನಕ್ಕೆ ಮೀನ ಮೇಷ ಎಣಿಸುತಿದೆ. ಅನ್ನಭಾಗ್ಯ ಘೋಷಣೆ ಮಾಡಿ ಇದೀಗ ಅಕ್ಕಿ ಇಲ್ಲಾ ಎಂದು ಕೇಂದ್ರ ಸರಕಾರದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದು
ಹೇಳಿದರು.ಅಕ್ಕಿಯ ಲಭ್ಯತೆಯನ್ನು ತಿಳಿಯದೆ ಘೋಷಣೆ ಮಾಡಿ ಈಗ ಕೇಂದ್ರ ಸರಕಾರವನ್ನು ದೂರುತಿದೆ. ಕೇಂದ್ರ ಸರಕಾರ ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ ನೀಡುತಿದೆ ಎಂದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಜನ ಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ಉಂಟಾಗಿದೆ. ವಿದ್ಯುತ್ ದರ ಏರಿಕೆ ಮಾಡಿದ್ದು ಎಲ್ಲರಿಗೂ ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ. ಮುದ್ರಾಂಕ ಶುಲ್ಕ ಏರಿಸಲಾಗಿದೆ ಎಂದು ಹೇಳಿದರು. ವಿದ್ಯುತ್ ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಹೆಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳ ಗುರುತಿಸುವಿಕೆಗೆ ಸೂಚನೆ- ಭಾಗೀರಥಿ ಮುರುಳ್ಯ:
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಆಭಗೊಂಡಿದ್ದು ಎಂಟು ತಿಂಗಳಲ್ಲಿ ಕಾಮಗಾರಿ ಪೂರ್ತಿ ಮಾಡುವುದಾಗಿ ತಿಳಿಸಿದ್ದಾರೆ. ತಾಲೂಕು ಕ್ರೀಡಾಂಗಣಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳಲಾಗುವುದು. ಸುಳ್ಯ ತಾಲೂಕಿನಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎ.ವಿ.ತೀರ್ಥರಾಮ, ಮುಳಿಯ ಕೇಶವ ಭಟ್, ವೆಂಕಟ್ ದಂಬೆಕೋಡಿ, ಸುಬೋದ್ ಶೆಟ್ಟಿ ಮೇನಾಲ, ಶಿವಾನಂದ ಕುಕ್ಕುಂಬಳ, ವಿನಯಕುಮಾರ್ ಕಂದಡ್ಕ, ಮಹೇಶ್ ಕುಮಾರ್ ಮೇನಾಲ, ಸುನಿಲ್ ಕೇರ್ಪಳ,ಪ್ರಸಾದ್ ಕಾಟೂರು, ಸುಪ್ರೀತ್ ಮೋಂಟಡ್ಕ ಉಪಸ್ಥಿತರಿದ್ದರು.