ಸುಳ್ಯ:ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ತುಂಬಿದ ಹಿನ್ನಲೆಯಲ್ಲಿ ಸುಳ್ಯ 60 ಸಂಭ್ರಮಾಚರಣೆ ಇಂದು (ಜ.21) ಸುಳ್ಯದ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ.
1965 ಡಿಸೆಂಬರ್ 17 ರಂದು ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ನಿಜಲಿಂಗಪ್ಪರವರು ಸುಳ್ಯಕ್ಕೆ ಆಗಮಿಸಿ ಸುಳ್ಯ ತಾಲೂಕನ್ನು
ಉದ್ಘಾಟಿಸಿದ್ದರು.ಬಳಿಕ ಎಲ್ಲಾ ಇಲಾಖೆಗಳ ಕಚೇರಿಗಳು ಸ್ಥಾಪನೆಯಾಗಿ ಪೂರ್ಣ ಪ್ರಮಾಣದ ತಾಲೂಕು ಕೇಂದ್ರವಾಗಿ ರೂಪುಗೊಂಡಿತು. ಸುಳ್ಯ ಹಲವು ಭಾಷೆ ಮತ್ತು ಸಂಸ್ಕೃತಿಯ ನೆಲ ಹಾಗೂ ಐತಿಹಾಸಿಕ ಹಿನ್ನಲೆಯಿರುವ ಕೃಷಿ ಪ್ರಧಾನ ಪ್ರದೇಶವಾಗಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕೆವಿಜಿ ವಿದ್ಯಾಸಂಸ್ಥೆಗಳಿಂದಾಗಿ ದೇಶದಲ್ಲೇ ಗುರುತಿಸಲ್ಪಡುವ ತಾಲೂಕಾಗಿದ್ದು ಇದೀಗ ತಾಲೂಕಿಗೆ 60 ವರ್ಷ ಪೂರೈಸುವ ಈ ಸಂದರ್ಭದಲ್ಲಿ ತಾಲೂಕಿನ ಷಷ್ಟ್ಯಬ್ಧ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ಪೂ.9 ಗಂಟೆಗೆ ಸುಳ್ಯದ ಶಾಸ್ತ್ರಿ ವೃತ್ತದಿಂದ ಶ್ರೀ ಕುರುಂಜಿ ಜಾನಕಿ ವೆಂಕಟ್ರಮಣ ಸಭಾಂಗಣದ ವರೆಗೆ ಭವ್ಯವಾದ ಮೆರವಣಿಗೆ ನಡೆಯಲಿದೆ, ಸುಳ್ಯದ 60 ವರ್ಷಗಳ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನವಾಗಲಿದೆ.

ಬಳಿಕ ಸಭಾ ವೇದಿಕೆಯಲ್ಲಿ ಸುಳ್ಯ ಅಂದು – ಇಂದು – ಮುಂದು ಎಂಬ ವಿಚಾರಗೋಷ್ಠಿ ನಡೆಯಲಿದೆ. ಎಂ.ಬಿ.ಸದಾಶಿವ, ಭರತ್ ಮುಂಡೋಡಿ ಮತ್ತು ಸಂತೋಷ್ ಕುತ್ತಮೊಟ್ಟೆ ವಿಚಾರ ಮಂಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಭಿವೃದ್ದಿ ಕುರಿತಾಗಿ ಪ್ರತಿಜ್ಞೆ ಸ್ವೀಕಾರ – ಜನ ಪ್ರಣಾಳಿಕೆ ಮಂಡನೆ ಮಾಡಲಾಗುವುದು. ತಾಲೂಕು ರಚನೆಗೆ ಪ್ರಯತ್ನಿಸಿದ ಮಹನೀಯರ ಸ್ಮರಣೆ ಹಾಗೂ
ಮಾಜಿ ಶಾಸಕರು,ಮಾಜಿ ಸಂಸದರು,ಮಾಜಿ ಸಚಿವರುಗಳನ್ನು ಗೌರವಿಸಲಾಗುತ್ತದೆ.











