ಸುಳ್ಯ:ಸುಳ್ಯದಲ್ಲಿ ನಡೆದ ಸುಳ್ಯ ತಾಲೂಕು ಷಷ್ಠಬ್ದ ಕಾರ್ಯಕ್ರಮದಲ್ಲಿ, ಜನಪ್ರತಿನಿಧಿಗಳು ಮತ್ತು ಸರಕಾರದ ಮುಂದೆ ಜನಪ್ರಣಾಳಿಕೆಯನ್ನು ಮಂಡಿಸಲಾಯಿತು. ಮುಂದಿನ 15 ವರ್ಷಗಳೊಳಗೆ ತಾಲೂಕಿನಲ್ಲಿ ಅನುಷ್ಠಾನಗೊಂಡಿರಬೇಕೆಂದು ಜನ ಬಯಸುವ ವಿವಿಧ ಬೇಡಿಕೆಗಳ ಜನ ಪ್ರಣಾಳಿಕೆಯನ್ನು ಸುಳ್ಯ ತಾಲೂಕು 60ರ ವರ್ಷಾಚರಣಾ ಸಮಿತಿಯ ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು ಹಾಗೂ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಮಂಡಿಸಿದರು.ಪ್ರಣಾಳಿಕೆಯ ಪ್ರಮುಖ ಅಂಶಗಳೆಂದರೆ
ಸುಳ್ಯ-ಸುಬ್ರಹ್ಮಣ್ಯ ರಸ್ತೆ, ಸುಳ್ಯ – ಬೆಳ್ಳಾರೆ ರಸ್ತೆ, ಕುಂಬ್ರ, ನಿಂತಿಕಲ್ ರಸ್ತೆ, ಮತ್ತು ಸುಬ್ರಹ್ಮಣ್ಯ ರಸ್ತೆಗಳನ್ನು ಚತುಷ್ಪಥ ರಸ್ತೆಗಳಾಗಿ ಮೇಲ್ದರ್ಜೆಗೇರಿಸಬೇಕು.ಸುಳ್ಯ ನಗರದ ಸಮೀಪದಿಂದ ಹಾದುಹೋಗುವ ರೀತಿಯಲ್ಲಿ ಕಾಞಂಗಾಡ್ – ಕಾಣಿಯೂರು ರೈಲು ಮಾರ್ಗ ಮತ್ತು ಮಂಗಳೂರು- ಪುತ್ತೂರು- ಸುಳ್ಯ- ಮಡಿಕೇರಿ – ಮೈಸೂರು ರೈಲು ಮಾರ್ಗ ನಿರ್ಮಿಸಬೇಕು.
ಸುಳ್ಯ ನಗರವನ್ನು ವಿಸ್ತರಿಸುವ ದೃಷ್ಟಿಯಿಂದ ಸುಳ್ಯ – ದುಗಲಡ್ಕ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವುದು ಹಾಗೂ ಸುಳ್ಯ ಸರಕಾರಿ ಬಸ್ ನಿಲ್ದಾಣವನ್ನು ವಿಶಾಲ ಸ್ಥಳಕ್ಕೆ ಸ್ಥಳಾಂತರಿಸುವುದು ಮತ್ತು ಜಟ್ಟಿಪಳ್ಳ ರಸ್ತೆಯಿಂದ ಗಾಂಧಿನಗರದ ವರೆಗೆ ಅಗಲವಾದ ರಿಂಗ್ ರೋಡ್ ನಿರ್ಮಿಸಬೇಕು. ಸುಳ್ಯದಲ್ಲಿ ಅತ್ಯುತ್ತಮ ಕ್ರೀಡಾ ಶಾಲೆ, ಕ್ರೀಡಾ ಸಂಕೀರ್ಣ ನಿರ್ಮಾಣ ಹಾಗೂ ಸುಮಾರು 8 ಎಕರೆ ಪ್ರದೇಶದಲ್ಲಿ 400 ಮೀಟರ್ ಟ್ರ್ಯಾಕ್ ಕ್ರೀಡಾಂಗಣ ಮತ್ತು ಹೆಲಿಪ್ಯಾಡ್ ನಿರ್ಮಾಣ ಮಾಡುವುದು.
ತಾಲೂಕಿನ ಜನರ ಪ್ರಮುಖ ಕೃಷಿಯಾದ ಅಡಿಕೆ ಮತ್ತು ರಬ್ಬರ್ ಕೃಷಿಯನ್ನು ಮೌಲ್ಯವರ್ಧನೆಗೊಳಿಸುವ ದೃಷ್ಟಿಯಿಂದ ಅದರ ಉತ್ಪನ್ನಗಳನ್ನು ಮಾಡುವ ಕೈಗಾರಿಕೆಗಳನ್ನು ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಸ್ಥಾಪಿಸುವುದು.
ತಾಲೂಕಿನಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಹಾಗೂ ಅದು ನಿರಂತರ ಮುಂದುವರಿಯುವ ದೃಷ್ಟಿಯಿಂದ ತಾಲೂಕಿನಲ್ಲಿ 140 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪನೆಯಾಗುವಂತೆ ಈಗಿನಿಂದಲೇ ಪ್ರಯತ್ನ ಆರಂಭಿಸುವುದು.
ಸುಳ್ಯ ತಾಲೂಕಿನಲ್ಲಿ ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ ತಾಲೂಕಿನ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ರಸ್ತೆ ಸೌಕರ್ಯ ಅಭಿವೃದ್ಧಿ ಪಡಿಸುವುದು ಹಾಗೂ ಆ ಸ್ಥಳಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಮೂಲ ಸೌಲಭ್ಯ ಕಲ್ಪಿಸುವುದು. ವಿಧಾನಸಭಾ ಕ್ಷೇತ್ರ ಮೀಸಲಾತಿ ಬಹುವರ್ಷ ಒಂದೇ ಕ್ಷೇತ್ರದಲ್ಲಿರದೆ ಎರಡು ಅಥವಾ ಮೂರು ಅವಧಿಗೊಮ್ಮೆ ಬೇರೆ ಬೇರೆ ಕ್ಷೇತ್ರಗಳಿಗೆ ಹೋಗುವಂತಹ ರೊಟೇಷನ್ ಸಿಸ್ಟಮ್ ಜಾರಿಗೆ ತಂದು ಆ ವ್ಯಾಪ್ತಿಯ ಪರಿಶಿಷ್ಟರೂ ಶಾಸಕರಾಗುವ ಅವಕಾಶ ಕಲ್ಪಿಸಬೇಕೆಂದು ಕೇಂದ್ರ ಸರಕಾರದ ಮುಂದೆ ಹಕ್ಕೊತ್ತಾಯ ಮಂಡಿಸುವುದು.
ಸುಳ್ಯ ವಿಧಾನಸಭಾ ಕ್ಷೇತ್ರ 1962 ರಿಂದ ಅಂದರೆ 63 ವರ್ಷಗಳಿಂದ ಮೀಸಲು ಕ್ಷೇತ್ರವಾಗಿದೆ. ಜನಸಂಖ್ಯೆಯ ಆಧಾರದಲ್ಲಿ ಮೀಸಲು ಕ್ಷೇತ್ರ ನಿಗದಿಯಾಗುವುದರಿಂದ, 2028 ಲ್ಲಿ ರಚನೆಯಾಗಲಿರುವ ಡಿ ಲಿಮಿಟೇಷನ್ ಕಮಿಟಿಗೆ ರೊಟೇಷನ್ ಸಿಸ್ಟಂನಲ್ಲಿ ಮೀಸಲಾತಿ ನಿಗದಿಪಡಿಸಲು ಕೇಂದ್ರ ಸರಕಾರ ಆದೇಶಿಸಿದರೆ ಮಾತ್ರ ಇತರ ಕ್ಷೇತ್ರಗಳಿಗೂ ಒಂದಲ್ಲ ಒಂದು ಅವಧಿಗೆ ಕ್ಷೇತ್ರ ಮೀಸಲಾತಿ ದೊರೆತು ಅಲ್ಲಿಯ ಪರಿಶಿಷ್ಟ ಜಾತಿ ಅಥವಾ ಪಂಗಡದವರಿಗೆ ಶಾಸಕರಾಗುವ ಅವಕಾಶ ಬರುತ್ತದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳಿಗೂ ಕಾಲಾನುಬದ್ಧವಾಗಿ ಮೀಸಲಾತಿ ನಿಗದಿಯಾಗುವಂತಾಗಿ, ಒಂದೇ ಕ್ಷೇತ್ರ ಅನೇಕ ವರ್ಷಗಳ ಕಾಲ ಮೀಸಲು ಕ್ಷೇತ್ರವಾಗಿರುವುದು ಬದಲಾಗಲಿ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಈ ವಿಚಾರ ಚರ್ಚೆಯಾಗಿ ಸೂಕ್ತ ಕಾನೂನು ರಚನೆಯಾಗಲಿ ಎಂದು ಒತ್ತಾಯಿಸಲಾಗಿದೆ.
ಇದು ಸುಳ್ಯ ತಾಲೂಕಿನ ಜನತೆಯ ಹಕ್ಕೊತ್ತಾಯದ, ಪ್ರಗತಿಯ ಪ್ರಣಾಳಿಕೆ. ಇದನ್ನು ಮುಂದಿನ 10 ಅಥವಾ 15 ವರ್ಷಗಳಲ್ಲಿ ಅನುಷ್ಠಾನವಾಗುವಂತೆ ಮಾಡಬೇಕೆಂದು ಶಾಸಕರಿಗೆ ಮತ್ತು ಸಂಸದರಿಗೆ ಮನವಿ ಅರ್ಪಿಸಲಾಯಿತು.












