ಬೆಂಗಳೂರು: ಇನ್ಫೊಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಅವರನ್ನು ಅಭಿನಂದಿಸಿದ್ದಾರೆ.’ಭಾರತದ ರಾಷ್ಟ್ರಪತಿ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ
ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ. ಸಮಾಜಸೇವೆ, ಲೋಕೋಪಕಾರ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸುಧಾಮೂರ್ತಿ ಅವರ ಕೊಡುಗೆ ಅಪಾರ ಮತ್ತು ಸ್ಪೂರ್ತಿದಾಯಕವಾಗಿದೆ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಮ್ಮ ‘ನಾರಿ ಶಕ್ತಿ’ಗೆ ಬಲ ಬಂದಂತಾಗಿದೆ. ಇದು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯವನ್ನು ಉದಾಹರಿಸುತ್ತದೆ. ಅವರ ಸಂಸದೀಯ ಅವಧಿ ಫಲಪ್ರದವಾಗಲಿ ಎಂದು ಮೋದಿ ಹಾರೈಸಿದ್ದಾರೆ.














