ಸುಳ್ಯ:ಸುಳ್ಯ ಯೋಜನಾ ಪ್ರಾಧಿಕಾರ ಮತ್ತು ಸುಳ್ಯ ತಾಲೂಕು ಪಂಚಾಯತ್ ವತಿಯಿಂದ ಸುಳ್ಯ ತಾಲೂಕು ಗ್ರಾಮ ಪಂಚಾಯತ್ಗಳ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜಂಟಿ ಸಭೆ ನಡೆಯಿತು. ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ವಿಷಯ ಪ್ರಸ್ತಾವನೆ ಮಾಡಿ ಸುಳ್ಯ ತಾಲೂಕಿನಲ್ಲಿ 9/ 11 ವಿನ್ಯಾಸ ಅನುಮೋದನೆ, ಕಟ್ಟಡ ಪರವಾನಿಗೆ, ಕನ್ವರ್ಷನ್ ಮೊದಲಾದ ಕಡತ ವಿಲೇವಾರಿಗೆ ಪ್ರಥಮ ಹಂತದಲ್ಲಿ
ಗ್ರಾಮ ಪಂಚಾಯತ್ ಅಧ್ಯಕ್ಷರುಗಳ ಮತ್ತು ಪಿಡಿಓಗಳ ಈ ಸಭೆ ಕರೆಯಲಾಗಿದೆ.ಇಲಾಖೆ ಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಸಾರ್ವಜನಿಕರ ಕೆಲಸಗಳು ತ್ವರಿತವಾಗಿ ನಡೆಯುತ್ತದೆ, 9 /11 ಸಮಸ್ಯೆ ಗಳ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಇಂತಹ ಸಭೆಗಳು ಅವಶ್ಯಕ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ವಹಿಸಿದ್ದರು.ಮಾತನಾಡಿ ಸುಳ್ಯ ತಾಲೂಕಿನಲ್ಲಿ ಈ ವರೆಗೆ 415 ಕಡತಗಳು ಸ್ವೀಕೃತ ಗೊoಡಿದ್ದು 232 ಕಡತಗಳಿಗೆ ಅನುಮೋದನೆ ನೀಡಲಾಗಿದೆ, ಗ್ರಾಮ ಪಂಚಾಯತ್ನಿಂದ ಸಮರ್ಪಕ ದಾಖಲೆ ಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಪ್ರಾಧಿಕಾರದಲ್ಲಿ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ 9/11 ಕಡತಗಳ ಅನುಮೋದನೆ ಗೆ ಪ್ರಸ್ತಾವನೆ ಸಲ್ಲಿಸುವಾಗ ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಟೌನ್ ಪ್ಲಾನರ್ ಫೈರೋಜ್ ಮಾಹಿತಿ ನೀಡಿದರು.ಸಂಪರ್ಕ ರಸ್ತೆ,ವಿನ್ಯಾಸ ನಕ್ಷೆ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಪ್ರಾಧಿಕಾರದ ಸದಸ್ಯ- ಕಾರ್ಯದರ್ಶಿ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕಿ ಸ್ವಾತಿ ಎನ್ ಸ್ವಾಮಿ ಸಭೆಗೆ ಮಾಹಿತಿ ನೀಡಿ 117 ಕಡತಗಳಿಗೆ ಹಿಂಬರಹ ನೀಡಲಾಗಿದ್ದು, ಇನ್ನು ಮುಂದೆ ದಾಖಲೆಗಳನ್ನು ಪರಿಶೀಲನೆ ಮಾಡಿ ಸರಿಯಾದ ರೀತಿಯಲ್ಲಿ ಸಲ್ಲಿಸಿದಲ್ಲಿ ಇಂತಹ ಪ್ರಕರಣ ಗಳು ಮರುಕಳಿಸದಂತೆ ನೋಡಿಕೊಳ್ಳಬಹುದಾಗಿದೆ ಎಂದರು.
ಗ್ರಾಮ ಪಂಚಾಯತ್ ಸದಸ್ಯರುಗಳ ಒಕ್ಕೂಟದ ಅಧ್ಯಕ್ಷ ಶೈಲೇಶ್ ಅoಬೆಕಲ್ಲು ವಂದಿಸಿದರು.





