ಸುಳ್ಯ:ವಿಭಜಿತ ನಿವೇಶನ, ಕಟ್ಟಡ, ಪ್ಲಾಟ್ಗಳಿಗೆ ವಿನ್ಯಾಸ ಅನುಮೋದನೆಯೊಂದಿಗೆ ಖಾತೆ ನೀಡಲು ಸರಕಾರ ಹಸಿರು ನಿಶಾನೆ ತೋರಿದೆ ಎಂದು ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ)ದ ಅಧ್ಯಕ್ಷ ಕೆ.ಎಂ.ಮುಸ್ತಫ ಹೇಳಿದ್ದಾರೆ. ಸುಳ್ಯ ಸೂಡ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲು ವಿಭಜಿತ ನಿವೇಶನದ ಕಟ್ಟಡ, ಪ್ಲಾಟ್, ಕಟ್ಟಡ ವಿನ್ಯಾಸ ಅನುಮೋದನೆಗೆ
ಅವಕಾಶ ಇರಲಿಲ್ಲ.ವಿನ್ಯಾಸ ಅನುಮೋದನೆ ಪಡೆಯದೆ ಖಾತೆ ಪಡೆದರೆ ಆ ಖಾತೆಯಲ್ಲಿ ಬ್ಯಾಂಕ್ ಲೋನ್ ಪಡೆಯಲು, ಕಟ್ಟಡ ಪರವಾನಿಗೆ ಇತರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.ಆ ಸಮಸ್ಯೆಗೆ ಪರಿಹಾರವಾಗಿ ವಿನ್ಯಾಸ ಅನುಮೋದನೆ ನೀಡಲು ಅವಕಾಶ ನೀಡಲಾಗಿದೆ. ಸೆ.10 2024ರ ಪೂರ್ವದಲ್ಲಿ ಭೂಪರಿವರ್ತನೆ ಆದ ಭೂಮಿಗೆ ವಿನ್ಯಾಸ ಅನುಮೋದನೆ ನೀಡಲು ಸಾಧ್ಯವಿದೆ.ಕಾನೂನು ಸರಳೀಕರಣ ಮಾಡಿ 20 ಅಡಿ ರಸ್ತೆ ಇದ್ದರೂ ಆ ಭೂಮಿಗೆ ವಿನ್ಯಾಸ ಅನುಮೋದನೆ ಮಾಡಿ ಎ ಖಾತೆ ನೀಡಬಹುದು.ಇನ್ನು ಮುಂದೆ ಅನಧಿಕೃತ ನಿರ್ಮಾಣ ಮಾಡಲು ಅವಕಾಶ ಇಲ್ಲ. ಎಲ್ಲಾ ನಿರ್ಮಾಣಗಳೂ ಕಾನೂನು ಚೌಕಟ್ಟಿನೊಳಗೆ ಮಾಡಬೇಕು ಎಂದರು. ಈ ಯೋಜನೆಯಿಂದ
ಸುಳ್ಯ ನಗರ ಪ್ರಾಧಿಕಾರ ವ್ಯಾಪ್ತಿಯಲ್ಲಿ ಸುಮಾರು 800 ಕ್ಕೂ ಮಿಕ್ಕಿ ಕುಟುಂಬಗಳು ಇದರ ಪ್ರಯೋಜನ ಪಡೆಯಲಿದ್ದು ಮುಂದೆ ಭೂಮಿ,ಮನೆ, ಕಟ್ಟಡ ಗಳಿಗೆ ಸಂಬಂದಿಸಿದoತೆ ವಿನ್ಯಾಸ ಅನುಮೋದನೆ, ಫಾರಂ 3,ಕಟ್ಟಡ ಪರವಾನಿಗೆ, ಮಾರಾಟ, ವಿಭಾಗ ಪತ್ರ, ಕಟ್ಟಡ ನಿರ್ಮಾಣ ಪರವಾನಿಗೆ ಕನ್ವರ್ಷನ್ ಮಾಡದೆ ಕಟ್ಟಡ ಕಟ್ಟಿದವರಿಗೆ ಭೂ ಪರಿವರ್ತನೆ ಮಾಡುವುದು ಸೇರಿದಂತೆ ಎಲ್ಲಾ ಕೆಲಸಗಳು ಸುಸೂತ್ರವಾಗಲಿದೆ ಎಂದು ಅವರು ತಿಳಿಸಿದರು.
ಬೇರೆ ಬೇರೆ ಕಡೆಗಳ ಅಧ್ಯಯನ ನಡೆಸಿದಾಗ ಇಲ್ಲಿ ಎದುರಾಗುವ ಹಲವು ಕಾನೂನು ತೊಡಕುಗಳು ಕಂಡು ಬಂದಿದ್ದು ದಕ್ಷಿಣ ಕನ್ನಡ,ಉಡುಪಿ, ಉತ್ತರ ಕನ್ನಡ ಸೇರಿದಂತೆ ವಿವಿಧ ಪ್ರಾಧಿಕಾರಗಳ ಅಧ್ಯಕ್ಷರ ಒಕ್ಕೂಟ ರಚಿಸಿ ಕರಾವಳಿಗೆ ಪ್ರತ್ಯೇಕ ಸರಳೀಕೃತ ಕಾನೂನು ರೂಪಿಸಬೇಕು ಎಂದು ಅಧಿಕಾರಿಗಳು,ಶಾಸಕರು, ಸಚಿವರುಗಳಿಗೆ ಮನವರಿಕೆ ಮಾಡಲಾಗಿತ್ತು.ಈ ಹಿನ್ನಲೆಯಲ್ಲಿ ಕಾನೂನಿನಲ್ಲಿ ಸರಳೀಕರಣ ಮಾಡಲಾಗಿದೆ. ಇದರಿಂದ ಆಗದೆ ಉಳಿದಿರುವ ಹಲವು ಕೆಲಸಗಳು ಮುಂದೆ ಸುಲಭದಲ್ಲಿ ಆಗಲಿದೆ ಎಂದರು.
ಸಾರ್ವಜನಿಕ ರಸ್ತೆಗಳು ಎಂದು ಘೋಷಣೆ:
ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ರಸ್ತೆಗಳ ಸಮೀಕ್ಷೆ ನಡೆಸಿ ಅದನ್ನು ನಗರ ಪಂಚಾಯತ್ ರಸ್ತೆಗಳು ಎಂದು ಘೋಷಿಸಬೇಕು ಎಂಬ ಪ್ರಸ್ತಾವನೆ ಇರಿಸಲಾಗಿದೆ. ನಗರ ಪಂಚಾಯತ್ ಅನುದಾನ ನೀಡಿದ,ಆಕ್ಷೇಪಣೆ ಇಲ್ಲದ ರಸ್ತೆಗಳನ್ನು ಮೊದಲ ಹಂತದಲ್ಲಿ ಸಾರ್ವಜನಿಕ ರಸ್ತೆ ಎಂದು ಘೋಷಿಸಲಾಗುವುದು.
ಸುಳ್ಯದಲ್ಲಿ ಸೂಡ ಅಸ್ತಿತ್ವಕ್ಕೆ ಬಂದ ಮೇಲೆ ನಗರ ವ್ಯಾಪ್ತಿಯಲ್ಲಿ 153 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು 142 ವಿಲೇವಾರಿ ಆಗಿದೆ, 8 ಅರ್ಜಿ ಉಳಿದಿದ್ದು 3ಕ್ಕೆ ಹಿಂಬರಹ ನೀಡಲಾಗಿದೆ. ಗ್ರಾಮಾಂತರ ಭಾಗದಲ್ಲಿ 9/11, ಫಾರಂ 3, ಕಟ್ಟಡ ಪರವಾನಿಗೆ ಮತ್ತಿತರ ವಿಷಯಗಳಿಗೆ ಸೂಡ ತಾಂತ್ರಿಕ ಸಲಹೆ ನೀಡುತಿದೆ.173 ಅರ್ಜಿ ಸ್ವೀಕರಿಸಲಾಗಿದ್ದು 156 ಅರ್ಜಿ ವಿಲೇವಾರಿ ಮಾಡಲಾಗಿದ್ದು 17 ಅರ್ಜಿಗಳಿಗೆ ಹಿಂಬರಹ ನೀಡಲಾಗಿದೆ ಎಂದು ಅವರು ಹೇಳಿದರು.

ಮಹಾಯೋಜನೆ ಷರತ್ತುಗಳು ಸರಳೀಕರಣ:
ಸುಳ್ಯದಲ್ಲಿ ಮಹಾ ಯೋಜನೆ ಅನುಸ್ಠಾನದ ಕಾನೂನನ್ನು ಸರಳೀಕರಣ ಮಾಡಲು ಮತ್ತು ನ್ಯೂನತೆಗಳನ್ನು ಸರಿಪಡಿಸಲು ಸಲಹೆ ನೀಡಲಾಗಿದೆ.ಸುಳ್ಯ ನಗರ ಮಹಾಯೋಜನೆ ಜನರಿಗೆ ಅನುಕೂಲ ವಾಗುವ ರೀತಿಯಲ್ಲಿ ಪರಿಷ್ಕರಿಸಿ ಶೀಘ್ರದಲ್ಲೇ ಸರಕಾರಕ್ಕೆ ಸಲ್ಲಿಕೆ ಮಾಡಲಾಗುವುದು.ನಗರ ಭೂ ಉಪಯೋಗಕ್ಕೆ ಸಂಬಂಧಿಸಿದಂತೆ ಮಹಾ ಯೋಜನೆ (ಮಾಸ್ಟರ್ ಪ್ಲಾನ್ )
ನಗರಾಭಿವೃದ್ಧಿ ಇಲಾಖೆಯಿಂದ ತಾತ್ಕಾಲಿಕ ಅನುಮೋದನೆ ಗೊಂಡಿದ್ದು ಈಗಾಗಲೇ ಸಲ್ಲಿಕೆಯಾಗಿರುವ ಆಕ್ಷೇಪಣೆ ಗಳಿಗೆ ಸಕಾರಾತ್ಮಕ ನಿರ್ಣಯ ಗಳನ್ನು ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುವುದು.ನಗರ ಪ್ರದೇಶಗಳಲ್ಲಿ ರಸ್ತೆ ಆಗಲೀಕರಣ ಸರಳ ಗೊಳಿಸಲು ನಮ್ಮ ಪ್ರದೇಶವನ್ನು ಹಿಲ್ ಏರಿಯಾ ಎಂದು ಪರಿಗಣಿಸಿರುವುದರಿಂದ ಆಗಲೀಕರಣ ಅಸಾಧ್ಯವಾದ ಸ್ಥಳಗಳಲ್ಲಿ 3.65 ಮೀಟರ್ ರಸ್ತೆಯನ್ನು ಪರಿಗಣಿಸಲಾಗುವುದು.ಸರ್ಕಾರದಿಂದ ನೀಡಿದ ನಿವೇಶನ ಗಳಲ್ಲಿ ಹಾಲಿ ರಸ್ತೆಗಳನ್ನು ಪರಿಗಣಿಸುವುದು.
ಮಹಾಯೋಜನೆ ಅನುಮೋದನೆ ಆದರೆ ವಸತಿ ವಲಯದಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಪ್ರತ್ಯೇಕ ಅನುಮತಿ ಅಗತ್ಯ ಇಲ್ಲ, ಸುಳ್ಯ ನಗರ ವ್ಯಾಪ್ತಿ ಒಟ್ಟು 741.20 ಹೆಕ್ಟೇರ್ ಪ್ರದೇಶ ಇದ್ದು 392.55 ಹೆಕ್ಟೇರ್ ಅಂದರೆ ಶೇ.52.96 ವಸತಿ ಪ್ರದೇಶ ಇದೆ. ಮಹಾ ಯೋಜನೆ ಅನುಷ್ಠಾನ ಸಂದರ್ಭ ಮುಖ್ಯ ರಸ್ತೆ 9 ಮೀಟರ್ ಇದ್ದರೂ ಒಳ ರಸ್ತೆಗಳು ಈಗ ಇರುವ ಅಳತೆಯಲ್ಲಿಯೇ ಅನುಮೋದನೆ ನೀಡಬೇಕು, ಪ್ಲಾಂಟೇಷನ್ ವಲಯದಲ್ಲಿ ಭೂಮಿ ಮಂಜೂರಾದವರಿಗೆ ಕೃಷಿ ವಲಯದ ನಿಯಮಾವಳಿ ಅಡಿಯಲ್ಲಿ ಸೌಲಭ್ಯ ನೀಡಬೇಕು, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸರಕಾರದಿಂದ ಕೊಡ ಮಾಡಿದ ನಿವೇಶನ ಇರುವ ಕಡೆ ಇದ್ದ ರಸ್ತೆಗೇ ಅನುಮೋದನೆ ಇತ್ಯಾದಿ ಉಪ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು
ಸುಳ್ಯವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ಇದರ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಕೆ.ಎಂ.ಮುಸ್ತಫ ವಿವರಿಸಿದರು.ಕೆರೆ ಅಭಿವೃದ್ಧಿಗೆ ಲಭ್ಯ ವಿರುವ ಅನುದಾನವನ್ನು ಸುಳ್ಯ ವ್ಯಾಪ್ತಿಯ ಲ್ಲಿ ಕೆರೆಗಳು ಇಲ್ಲದೇ ಇರುವುದರಿಂದ ಸಾರ್ವಜನಿಕ ಬಾವಿಗಳನ್ನು ದುರಸ್ಥಿಗೊಳಿಸಲು ಸದ್ರಿ ಅನುದಾನ ಬಳಸಲು ಅನುಮತಿಗಾಗಿ ಸರ್ಕಾರಕ್ಕೆ ಬರೆಯಲಾಗುವುದು ಹಾಗೂ ಸುಳ್ಯದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಸೂಡ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಎಂದು ಅವರು ಹೇಳಿದರು.





