ಸುಳ್ಯ:ಪರಿಸರ ನಾಶ, ಅರಣ್ಯ ನಾಶದಿಂದ ಪ್ರತಿ ವರ್ಷವೂ ಭೂಮಿ ಬತ್ತಿ ಬರಡಾಗುತ್ತಿದೆ. ಹವಾಮಾನ ವೈಪರೀತ್ಯ, ನೀರಿನ ಬವಣೆ, ಉಷ್ಣತೆ ವರ್ಷದಿಂದ ವರ್ಷಕ್ಕೆ ಏರುತಿದೆ. ಅರಣ್ಯ ಕಡಿಮೆಯಾಗುತ್ತಿದ್ದಂತೆ ಪರಿಸರದ ಅಸಮತೋಲನ ಸೃಷ್ಟಿಯಾಗುತ್ತಿದೆ.ಅದಕ್ಕೆ ಪರಿಸರ, ಮರ ಬೆಳೆಸುವುದೊಂದೇ ಪರಿಹಾರ ಎಂಬುದನ್ನು ಮನಗಂಡಿರುವ ಅರಣ್ಯ ಇಲಾಖೆ ಭೂಮಿಯನ್ನು ಹಸಿರಾಗಿಸಲು ಪಣತೊಟ್ಟಿದೆ. ಭೂಮಿಗೆ
ಹಸಿರು ಹೊದಿಕೆ ಹೊದಿಸಲು ಈ ಬಾರಿ ಸುಬ್ರಹ್ಮಣ್ಯ ಉಪವಿಭಾಗದ ಮೂರು ವಲಯಗಳಲ್ಲಿ ಒಟ್ಟು 2.03 ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ಸುಳ್ಯ ವಲಯದ ಮೇದಿನಡ್ಕ ಕೇಂದ್ರೀಯ ಸಸ್ಯಕ್ಷೇತ್ರದಲ್ಲಿ ಒಟ್ಟು 55 ಸಾವಿರ ಗಿಡಗಳನ್ನು ಬೆಳೆಯಲಾಗಿದೆ.ಇದರಲ್ಲಿ ಅರಣ್ಯ ಇಲಾಖೆಯ ನೆಡು ತೋಪುಗಳಲ್ಲಿ ನೆಡಲು 35 ಸಾವಿರ ಗಿಡ ಮತ್ತು ಸಾರ್ವಜನಿಕರ ವಿತರಣೆಗೆ 20 ಸಾವಿರ ಗಿಡಗಳನ್ನು ಮೀಸಲಿರಿಸಲಾಗಿದೆ. ಸುಳ್ಯ ವಲಯದಲ್ಲಿ ಈ ವರ್ಷ 80 ಹೆಕ್ಟೇರ್ ಪ್ರದೇಶದಲ್ಲಿ ಹೊಸತಾಗಿ ಅರಣ್ಯ ಬೆಳೆಸಲು ಯೋಜನೆ ರೂಪಿಸಲಾಗಿದೆ. ಅರಂತೋಡಿನ ನೆಕ್ಕರೆ, ದೇವಳಚಳ್ಳದ ಮಂಜೋಳುಕಜೆ, ಅಜ್ಜಾವರ, ಆಲೆಟ್ಟಿಯ ಕೂಟೇಲು, ಮರ್ಕಂಜದ ಕಾಯಾರಗಳಲ್ಲಿ ಗಿಡ ನೆಡುವ ಕಾರ್ಯ ನಡೆಯುತಿದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ.
ಪಂಜ ವಲಯದಲ್ಲಿ ಒಟ್ಟು 68,000 ಗಿಡಗಳನ್ನು ಬೆಳೆಸಲಾಗಿದ್ದು, 18 ಸಾವಿರ ಗಿಡ ಸಾರ್ವಜನಿಕರ ವಿತರಣೆಗೆ ಮತ್ತು 50,000 ಗಿಡ ನೆಡು ತೋಪುಗಳಲ್ಲಿ ನೆಡಲಾಗುವುದು. 95 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಬೆಳೆಸಲಾಗುತ್ತದೆ. ಬಳ್ಪ, ಇಚ್ಚಿಲಂಪಾಡಿ, ಕುಂತೂರು ಮತ್ತಿತರ ಕಡೆಗಳಲ್ಲಿ ನೆಡುತೋಪುಗಳನ್ನು ಬೆಳೆಸಲಾಗುತಿದೆ ಎನ್ನುತ್ತಾರೆ ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್ ಆರ್.
ಸುಬ್ರಹ್ಮಣ್ಯ ವಲಯದಲ್ಲಿ 80 ಸಾವಿರ ಗಿಡಗಳನ್ನು ಬೆಳೆಸಲಾಗಿದ್ದು,10 ಸಾವಿರ ಗಿಡ ರೈತರಿಗೆ ವಿತರಿಸಲು ಯೋಜನೆ ರೂಪಿಸಿದೆ.70 ಸಾವಿರ ಗಿಡಗಳನ್ನು ನೆಡು ತೋಪುಗಳಲ್ಲಿ ನೆಡಲಾಗುವುದು. ಸುಬ್ರಹ್ಮಣ್ಯ ವಲಯದಲ್ಲಿ 168.8 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಯೋಜನೆ ರೂಪಿಸಲಾಗಿದೆ.ಕೊಲ್ಲಮೊಗ್ರ, ಭಾಗ್ಯ, ಕೋಣಾಜೆ, ನೆಲ್ಯಡ್ಕ,ನೈಲ, ಮೀನಾಡಿ ಮತ್ತಿತರ ಕಡೆಗಳಲ್ಲಿ ಅರಣ್ಯ ಬೆಳೆಸಲಾಗುತ್ತಿದೆ ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ತಿಳಿಸಿದ್ದಾರೆ.
ವೈವಿಧ್ಯಮ ಗಿಡಗಳ ರಾಶಿ:
30ಕ್ಕೂ ಹೆಚ್ಚು ವೈವಿಧ್ಯ ಗಿಡಗಳನ್ನು ಈ ಬಾರಿ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಬೆಳೆಸಲಾಗಿದೆ. ನೇರಳೆ, ದಾಲ್ಚಿನ್ನಿ, ಕಾಯಿದೂಪ, ಹೆಬ್ಬಲಸು, ಬೀಟೆ, ಬಿಲ್ಮರ,ಬೇಂಗ, ಹಲಸು, ಹಾಲ್ಮಡ್ಡಿ, ರಕ್ತಮರ, ಮಾವು, ಹೊಳೆದಾಸವಾಳ, ಕೋಳಿಜುಟ್ಟು, ಬೊಳ್ಪಾಲೆ, ಅಂಡಿಪುನಾರ್, ಪಿಂಡಿಕಾಯಿ, ಕುಲೋವು, ಬೈನೆ, ಪುನರ್ಪುಳಿ, ರಾಂಪತ್ರೆ, ಜಂಬುನೇರಳೆ, ಅಬ್ಲಿಕೆ, ರೆಂಜ, ಕಿರಾಲ್ಬೋಗಿ, ಸಿರಿ ಹೊನ್ನೆ, ಬಸರಿ, ಹೊಳೆಮತ್ತಿ, ರಂಬೂಟನ್, ಅಶೋಕ, ಶ್ರೀಗಂಧ,ರಕ್ತ ಚಂದನ, ಪನ್ನೇರಳೆ, ಸಂಪಿಗೆ, ಹೊಂಗೆ, ಬಿಲ್ವಪತ್ರೆ, ಸಾಗುವಾನಿ, ಪುನರ್ಪುಳಿ, ವಾಟರ್ ಆಫಲ್, ಸ್ಟಾರ್ ಆಫಲ್ ಮೊದಲಾದ ಗಿಡಗಳನ್ನು ಕ್ಷೇತ್ರದಲ್ಲಿ ತಯಾರಿಸಲಾಗಿದೆ.
ಗಿಡ ಬೆಳೆಯಲು ಸಹಾಯಧನ:
ರೈತರಿಗೆ, ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ವಿತರಿಸಲಾಗುತ್ತದೆ. ಸಣ್ಣ ಗಿಡಗಳಿಗೆ 3 ರೂ, ಚಿಕ್ಕ ಗಿಡಗಳಿಗೆ 6 ರೂ ದರದಲ್ಲಿ ಗಿಡ ನೀಡಲಾಗುತ್ತದೆ. ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆಯಡಿಯಲ್ಲಿ ಗಿಡಗಳನ್ನು ಬೆಳೆಯಲು ರೈತರಿಗೆ ಸಹಾಯಧನವನ್ನೂ ನೀಡಲಾಗುತ್ತದೆ. ಪ್ರತಿ ಗಿಡಕ್ಕೆ ಮೊದಲ ವರ್ಷ 35, ಎರಡನೇ ವರ್ಷ 40 ಹಾಗೂ 3 ನೇ ವರ್ಷ 50 ಹೀಗೆ 3 ವರ್ಷದಲ್ಲಿ 125 ರೂಗಳನ್ನು ನೀಡಲಾಗುತ್ತದೆ.