*ಅನಿಲ್ ಹೆಚ್.ಟಿ.
ನಿಜ ಹೇಳಿ.. ನೀವು ಮುನಸ್ಸು ಬಿಚ್ಚಿ ನಗದೆ ಎಷ್ಟು ದಿನ, ಎಷ್ಟು ತಿಂಗಳು ಅಥವಾ ಎಷ್ಟು ವಷ೯ಗಳಾಯಿತು?
ನಗಬೇಕೆಂದಿದ್ದರೂ ಅದೊಂದು ಬಿಗುಮಾನ ಇದೆಯಲ್ಲ.. ಹಾಗೆಲ್ಲಾ ಸುಮ್ಮಸುಮ್ಮನೆ ನಗಬಾರದು ಅಂಥ.. ಹೀಗಾಗಿ ನಗದೇ.. ಹಲ್ಕಿರಿಯದೇ ಇರೋರೇ ಹೆಚ್ಚು.ತಾವು ನಗದೇ ಇದ್ದರೆ ಚಂದ ಅಂಥ ಭ್ರಮಿಸುವವರ ಸಂಖ್ಯೆ ಕೂಡ ಕಡಿಮೆಯೇನಿಲ್ಲ..ನೀವು ನಗುವುದನ್ನೇ ಮರೆತು ಹೋಗಿದ್ದರೆ ನಿಮಗೊಂದು ಅಪೂವ೯ ಅವಕಾಶ ಮತ್ತೆ ನಗಲು ಇಲ್ಲಿದೆ.
ಹಾಗೆಂದು ನೀವು ನಗುವುದೇ ಇಲ್ಲ ಅಂಥಾದಲ್ಲಿ ಈ ಛಾನ್ಸ್ ಖಂಡಿತಾ ನಿಮಗಲ್ಲ.ಹೌದು.. ನಕ್ಕು ನಕ್ಕೂ ಸುಸ್ತಾಗುವಂತೆ ಮಾಡುತ್ತಿರುವ
ಕನ್ನಡ ಸಿನಿಮಾವೊಂದು ಚಿತ್ರರಂಗದಲ್ಲಿ ಈಗ ಹೊಸ ಅಲೆ ಎಬ್ಬಿಸಿದೆ.
ಆ ಸಿನಿಮಾವೇ ಸು ಫ್ರಂ ಸೋ..
ವಿಚಿತ್ರ ಹೆಸರಿನಂತೆಯೇ ಈ ಚಿತ್ರದ ಕಥೆ ಕೂಡ ಸ್ವಲ್ಪ ವಿಚಿತ್ರವಾಗಿಯೇ ಇದೆ. ಈ ವಿಚಿತ್ರಗಳ ಚಿತ್ರ ಈಗ ಕನಾ೯ಟಕದಲ್ಲಿ ಚಿಂದಿ ಚಿತ್ರನ್ನದ ಹಾಗೇ ಸುನಾಮಿಯನ್ನೇ ಎಬ್ಬಿಸಿದೆ.
ಇನ್ನು ಮುಂದೆ ಥಿಯೇಟರ್ ಗೆ ಬರೋದೇ ಇಲ್ಲ ಎನ್ನುತ್ತಿದ್ದವರೆಲ್ಲಾ ಯಾವ ಥಿಯೇಟರ್ಗೆ ಹೋಗಲಿ ಎಂದು ಕುಟುಂಬ ಸಹಿತ ದೌಡಾಯಿಸುತ್ತಿದ್ದಾರೆ.
ಎಕ್ಕ, ಜೂನಿಯರ್ ನಂಥ ಕನ್ನಡ ಸಿನಿಮಾಗಳು, ಸೈಯಾರ ಎಂಬ ಹಿಂದಿ ಚಿತ್ರ, ಜುರಾಸಿಕ್ ವಲ್ಡ್ ಎಂಬ ಇಂಗ್ಲೀಷ್ ಚಿತ್ರ, ನಿತ್ಯ ಮೆನನ್ ನಾಯಕಿಯಾಗಿರುವ ಹೊಸ ತಮಿಳು ಚಿತ್ರಗಳು ಕರ್ನಾಟಕದ ಚಿತ್ರಮಂದಿರಗಳಲ್ಲಿ ಭಜ೯ರಿ ಹಿಟ್ ಆಗಿ ಧೂಳೆಬ್ಬಿಸುತ್ತಿರುವಂತೆಯೇ ಯಾವುದೇ ಅಬ್ಬರದ ಪ್ರಚಾರ ಇಲ್ಲದೇ ತೆರೆಕಂಡ ಸು ಫ್ರಂ ಸೋ ಚಿತ್ರ ಈಗ ಎಲ್ಲಾ ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿ ಹೊಸ ದಾಖಲೆಯನ್ನೇ ಮಾಡಲಾರಂಭಿಸಿದೆ.

ಸು ಫ್ರಂ ಸೋ ಚಿತ್ರವನ್ನು ನಿಮಿ೯ಸಿ ಅದರಲ್ಲೊಂದು ಮಹತ್ವದ ಪಾತ್ರ ಮಾಡಿದವರು ರಾಜ್ ಬಿ.ಶೆಟ್ಟಿ. ಇವರನ್ನು ಬಿಟ್ಟರೆ ಇಡೀ ಚಿತ್ರದಲ್ಲಿ ದೊಡ್ಡ ಸ್ಟಾರ್ ಗಳೇ ಇಲ್ಲ. ಎಲ್ಲರೂ ದಕ್ಷಿಣ ಕನ್ನಡದ ರಂಗಬೂಮಿ ಕಲಾವಿದರು. ರಾಜ್ ಶೆಟ್ಟಿಯ ಪಾತ್ರ ಕೂಡ ವಿಶೇಷವಾಗಿದೆ. ರಾಜ್ ಶೆಟ್ಟಿಯಂಥ ಬಹುಬೇಡಿಕೆಯ ನಟನೋವ೯ ಇಂಥ ಪಾತ್ರ ಮಾಡುವ ಮೂಲಕ ತನ್ನೊಳಗಿನ ಕಲಾಪ್ರತಿಭೆಯನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಿದ್ದಾರೆ.
ಆದರೆ, ಎಂಥ ಹೇಳೋದು ಮಾರಾಯರೇ, ಇವರೆಲ್ಲಾ ಹೇಗೆ ನಟಿಸಿದ್ದಾರೆ ಎಂದರೆ, ನಾಳೆಯೇ ಇವರಿಗೆಲ್ಲಾ ರಾಷ್ಟ್ರೀಯ ಪ್ರಶಸ್ತಿ ಬರೋ ಹಾಗೇ ಒಬ್ಬರಿಗೊಬ್ಬರು ಪೈಪೋಟಿ ನೀಡುವಂತೆ ನಟಿಸಿದ್ದಾರೆ. ಚಿತ್ರದಲ್ಲಿ ಇಂವ ಹಿರೋ ಎಂದು ಭಾವಿಸುತ್ತಿರುವಂತೆಯೇ ಮತ್ತೋವ೯ ಅದ್ಬುತ ಅಭಿನಯದ ಮೂಲಕ ನಾನೇ ಹೀರೋ ಎನ್ನುತ್ತಾನೆ. ಹೀಗಾಗಿಯೇ ಹೀರೋಗಳ ಇಸಂ ಇಲ್ಲದೇ, ಎಲ್ಲರೂ ಹೀರೋಗಳಂತೆ ವಿಜೖಂಭಿಸಿ ಸು ಪ್ರಂ ಸೋ ಚಿತ್ರವನ್ನು ಅಭೂತಪೂವ೯ವಾಗಿ ಗೆಲ್ಲಿಸಿದ್ದಾರೆ.
ಅಬ್ಬರದ ಪ್ರಚಾರ ಇಲ್ಲದೋ ಹೋದರೂ ಚಿತ್ರವೊಂದು ಗೆಲ್ಲಬಹುದು ಎಂಬುದಕ್ಕೆ ಸು ಫ್ರಂ ಸೋ ನಿದಶ೯ನ
ಸ್ಟಾರ್ ಗಳೇ ಬೇಡ.. ಅಪ್ಪಟ ಕಲಾವಿದರಿದ್ದರೂ ಚಿತ್ರವೊಂದು ಚೆನ್ನಾಗಿದ್ದರೆ ಗೆದ್ದೇ ಗೆಲ್ಲುತ್ತದೆ ಎಂಬುದಕ್ಕೂ ಈ ಚಿತ್ರ ಉದಾಹರಣೆ.
ವಿದೇಶಗಳಲ್ಲಿ ಕೈಕೈ ಹಿಡಿದು ಹೀರೋ ಹೀರೋಯಿನ್ ಡಾನ್ಸ್ ಮಾಡುವ ಬದಲಿಗೆ ನಮ್ಮೂರಿನ ಪರಿಸರದ ಸೌಂದಯ೯ವನ್ನೇ ವಿದೇಶಗಳಿಗೆ ಕಮ್ಮಿಯಿಲ್ಲದಂತೆ ಸೆರೆ ಹಿಡಿದರೆ ಚಿತ್ರ ಸಕ್ಸಸ್ ಆಗುತ್ತದೆ ಎಂಬುದಕ್ಕೂ ಈ ಚಿತ್ರ ನಿದಶ೯ನ
ಕಥೆ ಸರಳವಾಗಿರಬೇಕು. ಸಂಭಾಷಣೆ ಚುಟುಕಾಗಿರಬೇಕು. ಹಾಸ್ಯ ಮನಮುಟ್ಟುವಂತೆ ಇರಬೇಕು. ಹಾಡುಗಳು ಇಂಪಾಗಿರಬೇಕು. ಕನ್ನಡ ಪ್ರೇಕ್ಷಕ ಖುಷ್ ಆಗಲು ಇಷ್ಟೇ ಸಾಕು.
ತುಳುನಾಡಿನ ಸಂಪ್ರದಾಯವನ್ನೇ ಮೂಲವಾಗಿರಿಸಿಕೊಂಡು ಕೊಂಚವೂ ಚ್ಯುತಿ ಬಾರದಂತೆ ನವಿರಾಗಿ,ಹಾಸ್ಯದ ಪದರಿನಲ್ಲಿ ತೋರಿಸಿ, ಎಲ್ಲಿ ಬೇಕೋ ಅಲ್ಲಿ ಮೂಡನಬಿಂಕೆಗಳನ್ನು ಒಂದಷ್ಟು ಕುಟುಕಿ ಕೊನೇಯಲ್ಲಿ ಸಂದೇಶವೊಂದನ್ನು ಅಚ್ಚುಕಟ್ಟಾಗಿ ತೋರಿಸಿದ ಸಿನಿಮಾವಿದು.
ಮಂಗಳೂರಿನ ಕನ್ನಡವನ್ನು ಅಪಹಾಸ್ಯ ಮಾಡುತ್ತಾ, ಲೇವಡಿ ಮಾಡುತ್ತಿದ್ದವರು ಕೂಡ ಈಗ ಮಂಗಳೂರ ಕನ್ನಡದ ಚಿತ್ರದ ಟಿಕೇಟ್ಗಾಗಿ ಪರದಾಡುವಂತಾಗಿರುವುದು ಮಂಗಳೂರ ಕನ್ನಡದ ನಿಜವಾದ ಗತ್ತು.!
ಕನ್ನಡ ಚಿತ್ರರಂಗದ ಕಥೆ ಮುಗಿದೇಹೋಯಿತು. ಹಳೇ ಕಾಲದಂಥೆ ಮತ್ತೆ ಕನ್ನಡ ಚಿತ್ರಗಳಿಗೆ ವೈಭವದ ಕಾಲ ಬರೋದಿಲ್ಲ ಎಂದು ಬರೆದವರೆಲ್ಲಾ ಈಗ ಸು ಫ್ರಂ ಸೋ ಕಥೆ ಬಗ್ಗೆ ಹೊಗಳಿ ಹೊಗಳಿ ಬರೆಯುತ್ತಿದ್ದಾರೆ. ಹೊಸ ಇತಿಹಾಸವನ್ನೇ ಬರೆದಂತೆ ಈ ಸಿನಿಮಾ ರಾಜ್ಯದ ಅನೇಕ ಚಿತ್ರಮಂದಿಗಳಲ್ಲಿ ಬೆಳಗ್ಗೆ 6 ಗಂಟೆಗೆ ಪ್ರದರ್ಶನ ಪ್ರಾರಂಭಿಸಿದೆ. ಮಧ್ಯರಾತ್ರಿಯವರೆಗೂ ಸಿನಿಮಾ ಪ್ರದಶ೯ನವಾಗುತ್ತಿದೆ. ಎಲ್ಲವೂ ಹೌಸ್ ಫುಲ್.. ಧೂಳು ಮುಸುಕಿದ್ದ ಚಿತ್ರಮಂದಿರ ತುಂಬಿದೆ ಬೋಡ್೯ ಮತ್ತೆ ಕಲರ್ ಬಳಿದುಕೊಂಡು ಬೋಡ್೯ಗೆ ಬಂದಿದೆ!
ಎಲ್ಲಾ ಸರಿ.. ಚಿತ್ರದ ಕಥೆ ಎಂಥ? ಇದೊಳ್ಳೆ ಕಥೆ ಆಯ್ತಲ್ಲ ನಿಮ್ಮದು..
ಕಥೆ ಹಾಗೆಲ್ಲಾ ಹೇಳಿದರೆ ಎಂಥ ಮಜ ಹೇಳಿ.. ಥಿಯೇಟರ್ ನಲ್ಲಿಯೇ ಹೋಗಿ ನೋಡಿಯಲ್ಲ.ಮೊಬೈಲ್ ಕೊಂಡೊಯ್ದು ಅಲ್ಲಿಯೂ ಮೊಬೈಲ್ ಗೆ ಕಿವಿಯಾನಿಸಿಕೊಂಡಿರಬೇಡಿ. ಮನೆಯಲ್ಲಿ ಕುಕ್ಕರ್ ಮೇಲೆ ಹಾಲಿದೆಯೋ, ಗ್ಯಾಸ್ ಸ್ಟವ್ ಆಫ್ ಆಗಿದೆಯೋ, ಬಾಗಿಲಿಗೆ ಬೀಗ ಹಾಕಿದ್ದೇನಾ ಅಂತೆಲ್ಲಾ ಚಿಂತಿಸೋದು ಬಿಟ್ಟು ಹಾಯಾಗಿ ಎರಡೂವರೆ ಗಂಟೆ ನಗಲು ಮರೆಯಬೇಡಿ..ನಗುವ ಜಾತಿಯವರೇ ಅಲ್ಲ ಎಂದರೆ ದಯವಿಟ್ಟು ಸಿನಿಮಾಕ್ಕೆ ಹೋಗಿ ಉಪ್ ಅಂಥ ಕುಳಿತು ಅಕ್ಕಪಕ್ಕ ನಗಾಡುತ್ತಿರುವವರ ಮೂಡ್ ಹಾಳುಮಾಡಬೇಡಿ.!!
ಕಾಂತಾರ, ಕಾಸರಗೋಡು ಸರ್ಕಾರಿ ಪ್ರಾಥಮಿಕ ಶಾಲೆಯ ತಂಡದ ನಟರೆಲ್ಲಾ ಈ ಸಿನಿಮಾದಲ್ಲಿಯೂ ಇದ್ದಾರೆ. ಆ ಚಿತ್ರಗಳ ಮುಂದುವರೆದ ಭಾಗದಂತೆ ನಟರೂ ಅಷ್ಟೇ ಅದ್ಬುತವಾಗಿ ನಟಿಸಿದ್ದಾರೆ. ನಿದೇ೯ಶನ ಸೂಪರ್, ಬಾವ ಬಂದ ಎಂಬ ಹಿನ್ನಲೆ ಹಾಡು ನೋಡಿದವರು ಆ ಪಾತ್ರ ನಮ್ಮ ಮನೆಯ ಸುತ್ತಲೇ ಇದೆ ಎಂದು ಭಾವಿಸಿಯಾರು. ಅಷ್ಟು ಸಹಜವಾಗಿದೆ.ನಮ್ಮದೇ ಗ್ರಾಮದ ಪರಿಸರದಲ್ಲಿ ನಡೆದ ಕಥೆಯೇನೋ ಎಂಬಂತೆ, ನಾವೂ ಈ ಪ್ರಸಂಗವನ್ನೆಲ್ಲಾ ನೋಡಿದ್ದೇವೆ. ಅನುಭವಿಸಿದ್ದೇವೆ. ನಮ್ಮ ಹಳ್ಳಿಯಲ್ಲಿಯೂ ಇಂಥ ಕ್ಯಾರೆಕ್ಟರ್ ಗಳು ಇನ್ನೂ ಇವೆ ಎಂಬಂತೆ… ಪ್ರತೀ ಪಾತ್ರಧಾರಿಯೂ ನಮ್ಮ ಪರಿಸರದಲ್ಲಿದ್ದು ನಾವೆಲ್ಲಾ ಇಂಥ ಪಾತ್ರವನ್ನು ನಿತ್ಯ ನೋಡಿದ ಅನುಭವ ಕಟ್ಟಿಕೊಡುವಲ್ಲಿ ಸು ಫ್ರಂ ಸೋ ಅತ್ಯಂತ ಯಶಸ್ನಿಯಾಗಿದೆ.ನಮ್ಮದೇ ಗ್ರಾಮದ ಕಥೆಯನ್ನು ಸಮಥ೯ವಾಗಿ ಕಟ್ಟಿಕೊಡುವಲ್ಲಿ ಈ ಚಿತ್ರ ಯಶಸ್ವಿಯಾದ ಕಾರಣವೇ ಅದಕ್ಕೆ ಇಂಥದ್ದೊಂದು ಭಜ೯ರಿ ಯಶಸ್ಸು ಸಿಕ್ಕಿದೆ
ಈ ಚಿತ್ರವನ್ನು ನಾಳೆಯೇ ಹೋಗಿ ನೋಡಬೇಕೆಂದಿಲ್ಲ. ಯಾಕೆಂದರೆ ಯಾವ ಥಿಯೇಟರ್ ನಲ್ಲಿಯೂ ನಿಮಗೆ ಟಿಕೇಟ್ ಸಿಕ್ಕಲಿಕ್ಕಿಲ್ಲ. ಹೇಗಿದ್ದರೂ 100-200 ದಿನ ಪ್ರದಶ೯ನ ಕಾಣೋದು ಗ್ಯಾರಂಟಿ.. ಹೀಗಾಗಿ ಯಾವಾಗ ಬೇಕಾದರೂ ಹೋಗಿ, ಚಿತ್ರ ನೋಡಿ ಒಂದಿಷ್ಟು ನಕ್ಕು ಬನ್ನಿ..
ಪಾತ್ರಧಾರಿಗಳು, ಸಂಕಲನ, ಸಂಗೀತ, ಪೈಟ್ ಡೈರೆಕ್ಟರ್, ಕ್ಯಾಮರಮನ್ ಮುಂತಾದವರ ವಿವರ ಅನಗತ್ಯ. ಯಾಕೆಂದರೆ ಎಲ್ಲರೂ ಒಟ್ಟುಗೂಡಿ, ಕಟ್ಟಿಕೊಟ್ಟ ಸುಂದರ ಚಿತ್ರಕಾವ್ಯವೇ.
ಸುಲೋಚನ ಫ್ರಂ ಸೋಮೇಶ್ವರ..

(ಅನಿಲ್ ಎಚ್.ಟಿ. ಅವರು ಹಿರಿಯ ಪತ್ರಕರ್ತರು ಅಂಕಣಕಾರರು. ಕಲೆ, ಸಾಂಸ್ಕೃತಿಕ ವಿಶ್ಲೇಷಕರು)





