ಬೆಂಗಳೂರು: 2024–25ನೇ ಸಾಲಿನ ರಾಜ್ಯ ಬಜೆಟ್ ಶುಕ್ರವಾರ (ಫೆ.16) ಬೆಳಿಗ್ಗೆ 10.15ಕ್ಕೆ ಮಂಡನೆಯಾಗಲಿದೆ.
ಈವರೆಗೆ 14 ಬಜೆಟ್ ಮಂಡಿಸಿ ರಾಜ್ಯದಲ್ಲಿ ದಾಖಲೆ ಸೃಷ್ಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಹೊಸ ಜನಪ್ರಿಯ ಘೋಷಣೆ, ಚುನಾವಣೆ ಕಾರಣಕ್ಕೆ ಹೊಸ ತೆರಿಗೆಯ ಭಾರ ಹಾಕದಿರುವ
ಬಜೆಟ್ ಇದಾಗಿರಲಿದೆ. ಜುಲೈನಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಪರಿಷ್ಕೃತ ಬಜೆಟ್ನ ಮೊತ್ತ 3.27 ಲಕ್ಷ ಕೋಟಿಯಾಗಿತ್ತು. ಈ ಬಾರಿ ಬಜೆಟ್ ಮೊತ್ತ 3.80 ಲಕ್ಷ ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದ ಬರೆಯ ಮಧ್ಯೆ ವಿತ್ತೀಯ ಶಿಸ್ತಿನ ಪರಿಮಿತಿಯಲ್ಲಿ ವೆಚ್ಚ, ಸಂಪನ್ಮೂಲ ಕ್ರೋಡೀಕರಣದ ‘ಲೆಕ್ಕಾಚಾರ’ಗಳು ಈ ಬಜೆಟ್ ಮೇಲಿನ ಕುತೂಹಲವನ್ನು ಹೆಚ್ಚಿಸಿವೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಆರ್ಥಿಕ ಭಾರ, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು, ಸಹಾಯಾನುದಾನ ಕೊರತೆಯ ಮಧ್ಯೆಯೇ ಜನಪ್ರಿಯ ಬಜೆಟ್ ಮಂಡಿಸಲು ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ. ಗ್ಯಾರಂಟಿಗಳಿಗಾಗಿಯೇ 58 ಸಾವಿರ ಕೋಟಿ ತೆಗೆದಿಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಕೃಷಿ, ಕೈಗಾರಿಕಾ ವಲಯಗಳಿಗೆ ಉತ್ತೇಜನ ನೀಡುವ, ಮಧ್ಯಮ ವರ್ಗ ಮತ್ತು ಕೂಲಿ ಕಾರ್ಮಿಕರಿಗೆ ಸಹಾಯಕವಾದ ಬಜೆಟ್ ಮಂಡಿಸುವ ನಿರೀಕ್ಷೆ ಇದೆ.









