ಸುಳ್ಯ:ಸುಳ್ಯ ಶಾಂತಿನಗರದ ತಾಲೂಕು ಕ್ರೀಡಾಂಗಣ ಕಾಮಗಾರಿ ಸಂದರ್ಭದಲ್ಲಿ ತೆಗೆಯಲಾದ ಮಣ್ಣನ್ನು ಗ್ರೌಂಡ್ನ ಕೆಳ ಭಾಗದಲ್ಲಿ ಹಾಕಲಾಗಿದ್ದು ಇದು ಅಪಾಯಕಾರಿಯಾಗಿತ್ತು. ಇದೀಗ ಈ ಮಣ್ಣಿನ ಕೆಳಗೆ ತಡೆಗೋಡೆ ನಿರ್ಮಾಣ ನಡೆಸಲಾಗಿದೆ. ಕ್ರೀಡಾಂಗಣ ನಿರ್ಮಾಣ ಸಂದರ್ಭದಲ್ಲಿ ಅಗೆಯಲಾದ ನೂರಾರು ಲೋಡ್ ಮಣ್ಣನ್ನು ಗ್ರೌಂಡ್ನ ಕೆಳ ಭಾಗದಲ್ಲಿ ಬೆಟ್ಟದಾಕಾರದಲ್ಲಿ ತುಂಬಿಡಲಾಗಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಗ್ರೌಂಡ್ನ ಕೆಳ ಭಾಗದಲ್ಲಿ
ವಾಸಿಸುವ ಮನೆಯವರಲಲ್ಲಿ ಆತಂಕ ಉಂಟಾಗಿತ್ತು. ಇಲ್ಲಿ ತಡೆಗೋಡೆ ನಿರ್ಮಾಣ ಆಗಬೇಕು ಎಂಬ ಬೇಡಿಕೆ ಉಂಟಾಗಿತ್ತು.ಈ ಹಿನ್ನಲೆಯಲ್ಲಿ ನಿರಂತರ ಬೇಡಿಕೆಯ ನಂತರ ಕೆಳ ಭಾಗದಲ್ಲಿ ಸಂರಕ್ಷಣಾ ಭಿತ್ತಿ ನಿರ್ಮಾಣ ಮಾಡಲಾಗಿದೆ. ಮೊದಲೇ ಇದ್ದ ಸಣ್ಣ ತಡೆಗೋಡೆ ಮೇಲೆ ಎರಡು ಮೀಟರ್ನಷ್ಟು ಎತ್ತರಕ್ಕೆ ಏರಿಸಿ ಹೊಸ ತಡೆಗೋಡೆ ನಿರ್ಮಿಸಲಾಗಿದೆ. ಸುಮಾರು 80 ಮೀಟರ್ ಉದ್ದಕ್ಕೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಶಾಸಕಿ ಭಾಗೀರಥಿ ಮುರುಳ್ಯ ಅವರ ಶಿಫಾರಸ್ಸಿನ ಮೇರೆಗೆ ಕ್ರೀಡಾ ಇಲಾಖೆಯ ವತಿಯಿಂದ ಮಂಜೂರಾದ 10 ಲಕ್ಷ ರೂ ಅನುದಾನದಲ್ಲಿ
ತಡೆಗೋಡೆ ಕಾಮಗಾರಿ ನಡೆಸಲಾಗಿದೆ. ನಿರ್ಮಿತಿ ಕೇಂದ್ರದ ನೇತೃತ್ವದಲ್ಲಿ ಕಾಮಗಾರಿ ಮಾಡಲಾಗಿದೆ. ಅಲ್ಲದೆ ನೀರು ಹರಿಯಲು ಕಾಂಕ್ರೀಟ್ ಚರಂಡಿ ನಿರ್ಮಾಣ ಮಾಡಲಾಗಿದೆ. ಈ ಮೊದಲು ತುಂಬಿದ್ದ ಮಣ್ಣು ಜರಿಯದಂತೆ ಅಂತರಗಳ ನಿರ್ಮಾಣ ಮಾಡಲಾಗಿದೆ. ನೀರು ಹರಿಯಲು ಪೈಪ್ ಅಳವಡಿಸಲಾಗಿದೆ ಎಂದು ಕಾಮಗಾರಿ ನಡೆಸಿದ ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್ ಮೆದು ತಿಳಿಸಿದ್ದಾರೆ.
400 ಮೀಟರ್ ಟ್ರ್ಯಾಕ್ ನಿರ್ಮಾಣ:
ಶಾಂತಿನಗರದ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಸರಕಾರದಿಂದ ಒಂದು ಕೋಟಿ ಅನುದಾನ ಬಿಡುಗಡೆ ಆಗಿತ್ತು. ಇದರಲ್ಲಿ ಕ್ರೀಡಾಂಗಣದ ಅಗಲೀಕರಣ ಕಾಮಗಾರಿ ನಡೆಸಲಾಗಿದೆ. ಇನ್ನು ಸುಮಾರು 15 ಲಕ್ಷ ರೂ ಉಳಿದಿದ್ದು ಈ ಅನುದಾನದ ಕಾಮಗಾರಿ ಬಾಕಿ ಉಳಿದಿದೆ. ಈ ಅನುದಾನದಲ್ಲಿ 400 ಮೀಟರ್ ಟ್ರ್ಯಾಕ್ ನಿರ್ಮಾಣ ಆಗಲಿದೆ ಎಂದು ಇಂಜಿನಿಯರ್ಗಳು ತಿಳಿಸಿದ್ದಾರೆ.