ಸುಳ್ಯ: ಸುಳ್ಯ ನಗರ ಸಮೀಪದ ಶಾಂತಿನಗರ ತಾಲೂಕು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ನಡೆಸಿ ಕೆಳ ಭಾಗದಲ್ಲಿ ತುಂಬಿಡಲಾಗಿರುವ ಬೃಹತ್ ಪ್ರಮಾಣದ ಮಣ್ಣಿನಲ್ಲಿ ಈಗ ಭಾರೀ ಗಾತ್ರದ ಬಿರುಕು ಕಾಣಿಸಿಕೊಂಡಿದೆ ಕ್ರೀಡಾಂಗಣ ಕಾಮಗಾರಿ ನಡೆಸಿ ಕೆಳಭಾಗದಲ್ಲಿ ಸುಮಾರು 100 ಅಡಿ ಎತ್ತರಕ್ಕೆ, 100 ಮೀಟರ್ ಅಗಲಕ್ಕೆ ಮಣ್ಣು ತುಂಬಿಡಲಾಗಿದೆ. ಈ ಮಣ್ಣಿನಲ್ಲಿ ಸುಮಾರು 25 ಮೀಟರ್ ಉದ್ದಕ್ಕೆ ಬೃಹತ್ ಗಾತ್ರದ ಬಿರುಕುಗಳು

ಉಂಟಾಗಿದೆ. ಇದು ಕ್ರೀಡಾಂಗಣದ ಕೆಳ ಭಾಗದಲ್ಲಿರುವ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಕೆಳ ಭಾಗದಲ್ಲಿ ನಿರ್ಮಿಸಲಾಗುವುದು ಎಂದು ಹೇಳಲಾಗಿರುವ ತಡೆಗೊಡೆ ಕಾಮಗಾರಿ ನಡೆಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಫೆಬ್ರವರಿ ತಿಂಗಳಲ್ಲಿ ಶಾಂತಿನಗರ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯ ಆರಂಭಿಸಿ ಕ್ರೀಡಾಂಗಣದ ಅಗಲ ಮಾಡಲಾಗಿತ್ತು. ಈ ಮಣ್ಣನ್ನು ಕೆಳ ಭಾಗದಲ್ಲಿ ಭಾರೀ ಎತ್ತರಕ್ಕೆ ತುಂಬಿಡಲಾಗಿತ್ತು. ಇದು ಸ್ಥಳೀಯರ ಆತಂಕಕ್ಕೆ ಮತ್ತು ಭಾರೀ ರಾಜಕೀಯ ವಿವಾದಕ್ಕೆ

ಕಾರಣವಾಗಿತ್ತು. ಮಣ್ಣು ಕುಸಿಯದಂತೆ ಕೆಳಬಾಗದಲ್ಲಿ ತಡೆಗೋಡೆಯನ್ನು ನಿರ್ಮಿಸಬೇಕು ಎಂಬ ಆಗ್ರಹವನ್ನು ಸ್ಥಳೀಯರು ಜನಪ್ರತಿನಿಧಿಗಳ ಮುಂದಿರಿಸಿದ್ದರು. ಸಚಿವ ಅಂಗಾರ ಸೇರಿದಂತೆ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಥಳಕ್ಕೆ ಬಂದು ಪರಶೀಲನೆ ನಡೆಸಿ ತಡೆಗೋಡೆ ನಿರ್ಮಾಣ ಮಾಡುವ ಭರವಸೆ ನೀಡಿದ್ದರು.ಮತ್ತು ಮಳೆಗಾಲದಲ್ಲಿ ಮಣ್ಣು ಕುಸಿಯದಂತೆ ತಾತ್ಕಾಲಿಕವಾಗಿ ಮಣ್ಣಿನ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಸಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿತ್ತು. ಇದೀಗ ಪ್ಲಾಸ್ಟಿಕ್ ಟರ್ಪಲ್ ಸಂಪೂರ್ಣ ಹರಿದು ಹೋಗಿದ್ದು ಹಾಕಿದ ಮಣ್ಣಿನಲ್ಲಿ ಭಾರಿ ಗಾತ್ರದ

ಬಿರುಕುಗಳು ಕಾಣಿಸಿ ಕೊಂಡಿದೆ.ಮಳೆಯ ನೀರು ಹರಿದುಬಂದು ಈ ಬಿರುಕಿನ ಮೂಲಕ ಮಣ್ಣಿನೊಳಗೆ ಸೇರುತ್ತಿದೆ. ಇದರಿಂದ ಸ್ಥಳೀಯರಲ್ಲಿ ಮತ್ತೆ ಆತಂಕ ಎದುರಾಗಿದೆ. ಆದಷ್ಟು ಬೇಗ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.
