ಸುಳ್ಯ: 2025ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯು ಮಾ.21ರಿಂದ ಆರಂಭಗೊಂಡು ಎ.4ರವರೆಗೆ ನಡೆಯುವುದು.ರಾಜ್ಯದಲ್ಲಿ 2,818 ಕೇಂದ್ರಗಳಲ್ಲಿ 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.ರಾಜ್ಯದ 15,881 ಪ್ರೌಢಶಾಲೆಗಳ 4.61 ಲಕ್ಷ ಬಾಲಕರು, 4.34 ಲಕ್ಷ ಬಾಲಕಿಯರು ಈ ಬಾರಿ
ಪರೀಕ್ಷೆ ತೆಗೆದುಕೊಂಡಿದ್ದಾರೆ.ಮೊದಲ ದಿನ ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಪರೀಕ್ಷೆಗಳು ಬೆಳಿಗ್ಗೆ 10ರಿಂದ 1.15ರವರೆಗೆ ನಡೆಯಲಿವೆ.
ಸುಳ್ಯ ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಬಾರಿ ತಾಲೂಕಿನಿಂದ 1992 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸುಳ್ಯ ನಗರದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ,
ಕರ್ನಾಟಕ ಪಬ್ಲಿಕ್ ಶಾಲೆ ಗಾಂಧಿನಗರ, ಸುಳ್ಯ ಬೀರಮಂಗಲ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆ, ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು, ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಶಾಲೆ, ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಾಗಿದೆ.
ಸುಳ್ಯ ತಾಲೂಕಿನ 36 ಪ್ರೌಢಶಾಲೆಗಳಿಂದ 1882 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಹೊಸ ಖಾಸಗಿ ಅಭ್ಯರ್ಥಿಗಳಾಗಿ 71 ಮಂದಿ, ಪುನರಾವರ್ತಿತ ಶಾಲಾ ವಿದ್ಯಾರ್ಥಿಗಳು 25 ಹಾಗೂ ಪುನರಾವರ್ತಿತ ಖಾಸಗಿ ವಿದ್ಯಾರ್ಥಿಗಳು 14 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಹೀಗೆ ಒಟ್ಟು 1992 ಮಂದಿ ಪರೀಕ್ಷೆ ಬರೆಯುವರು.
ನಕಲು ತಡೆ ಹಾಗೂ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಪರೀಕ್ಷಾ ಕೊಠಡಿಗಳಲ್ಲಿ ವೆಬ್ಕಾಸ್ಟಿಂಗ್ ಅಳವಡಿಸಲಾಗಿದೆ. ಹೊರಗೆ ಸಿ.ಸಿ.ಟಿ.ವಿ ಕಣ್ಗಾವಲು ಇರಲಿದೆ.
ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ:
ಮಾರ್ಚ್ 21–ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ (ಎನ್ಸಿಇಆರ್ಟಿ), ಸಂಸ್ಕೃತ, 24–ಗಣಿತ, 26–ದ್ವಿತೀಯ ಭಾಷೆಗಳಾದ ಇಂಗ್ಲಿಷ್, ಕನ್ನಡ, 29–ಸಮಾಜ ವಿಜ್ಞಾನ, ಏಪ್ರಿಲ್ 1–ಅರ್ಥಶಾಸ್ತ್ರ, ಎಂಜಿನಿಯರಿಂಗ್ ವಿಷಯಗಳು, 2–ವಿಜ್ಞಾನ ಹಾಗೂ ರಾಜ್ಯಶಾಸ್ತ್ರ, ಹಿಂದೂಸ್ತಾನಿ, ಕರ್ನಾಟಕ ಸಂಗೀತ, 4–ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಹಾಗೂ ಎನ್ಎಸ್ಕ್ಯೂಎಫ್ ವಿಷಯಗಳು.