ಕೊಲಂಬೊ: ಕೊನೆಯವರೆಗೂ ರೋಚಕತೆ ತುಂಬಿದ್ದ ಏಷ್ಯಾ ಕಪ್ ಸೂಪರ್ ಫೋರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಎರಡು ವಿಕೆಟ್ಗಳಿಂದ ಸೋಲಿಸಿದ ಶ್ರೀಲಂಕಾ ಫೈನಲ್ ತಲುಪಿತು.
ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ ಮತ್ತು ಭಾರತ ತಂಡಗಳು ಮುಖಾಮುಖಿಯಾಗಲಿವೆ.
ನಿಗದಿತ 42 ಓವರ್ಗಳಲ್ಲಿ 7 ವಿಕೆಟ್ಗಳಿಗೆ 253 ರನ್ ಗುರಿ ಪಡೆದ
ಲಂಕಾಗೆ ಕುಶಾಲ್ ಮೆಂಡಿಸ್ (91;87ಎ, 4X8, 6X1), ಸದೀರ ಸಮರವಿಕ್ರಮ (48; 54, 4X4) ಅವರ ಬ್ಯಾಟಿಂಗ್ ಬಲ ತುಂಬಿತು. ಕೊನೆಯ ಹಂತದಲ್ಲಿ ಪಾಕ್ ಬೌಲರ್ಗಳು ವಿಕೆಟ್ ಉರುಳಿಸಿ ಬಿಗು ಹಿಡಿತ ಸಾಧಿಸಿದರೂ ಚರಿತ ಅಸಲಂಕಾ (49; 47ಎ, 4X3, 6X1) ಔಟಾಗದೆ ದಿಟ್ಟ ಹೋರಾಟ ನಡೆಸಿದರು. ಕೊನೆಯ ಎರಡು ಎಸೆತದಲ್ಲಿ ಆರು ರನ್ ಬೇಕಿದ್ದಾಗ 4, 2 ರನ್ ಗಳಿಸಿ ಗೆಲುವು ಗಡಿ ದಾಟಿಸಿದರು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ಮೊಹಮ್ಮದ್ ರಿಜ್ವಾನ್ ಮತ್ತು ಅಬ್ದುಲ್ಲಾ ಶಫೀಕ್ ಅವರ ಅರ್ಧಶತಕಗಳ ಬಲದಿಂದ 42 ಓವರ್ಗಳಲ್ಲಿ 7 ವಿಕೆಟ್ಗಳಿಗೆ 252 ರನ್ ಗಳಿಸಿತು.
ಈ ಸವಾಲಿನ ರನ್ ಬೆನ್ನು ಹತ್ತಿದ ಶ್ರೀಲಂಕಾ 42 ಓವರ್ಗಳಲ್ಲಿ 8 ವಿಕೆಟ್ಗೆ 253 ರನ್ ಗಳಿಸಿ ಗೆಲುವಿನ ನಗು ಬೀರಿತು. ಆರಂಭಿಕ ಆಟಗಾರರಾದ ಪಥುಮ್ ನಿಸ್ಸಾಂಕ (29) ಮತ್ತು ಕುಶಾಲ್ ಪೆರೆರಾ (17) ಬೇಗ ಔಟಾದರೂ ಮೂರನೇ ವಿಕೆಟ್ಗೆ ಕುಶಾಲ್ ಮೆಂಡಿಸ್ ಮತ್ತು ಸದೀರ ಸಮರವಿಕ್ರಮ ಅವರು 100 ರನ್ಗಳ ಜೊತೆಯಾಟ ನೀಡಿ, ತಂಡಕ್ಕೆ ಆಸರೆಯಾದರು. ಇಫ್ತಿಕಾರ್ ಅಹಮದ್ 3, ಶಾಹೀನ್ ಶಾ ಆಫ್ರಿದಿ ಎರಡು ವಿಕೆಟ್ ಪಡೆದರು. ಟಾಸ್ ಗೆದ್ದ ಪಾಕಿಸ್ತಾನ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಬ್ದುಲ್ಲಾ ಶಫೀಕ್ (52; 69ಎ, 4X3, 6X2), ನಾಯಕ ಬಾಬರ್ ಆಜಂ (29) ಮೊಹಮ್ಮದ್ ರಿಜ್ವಾನ್ (ಅಜೇಯ 86; 73ಎ, 4X6, 6X2) ಇಫ್ತಿಕಾರ್ ಅಹಮದ್ (47; 40ಎ, 4X4, 6X2) ಇನಿಂಗ್ಸ್ಗೆ ಬಲ ತುಂಬಿದರು.