ಲಾಹೋರ್: ಅಫ್ಘಾನಿಸ್ತಾನ ವಿರುದ್ಧ 2ರನ್ನಿಂದ ರೋಚಕ ಜಯ ದಾಖಲಿಸಿದ ಶ್ರೀ ಲಂಕಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಿತು. ಸೂಪರ್ 4 ಪ್ರವೇಶಿಸಲು ಪಂದ್ಯದಲ್ಲಿ ಗೆಲ್ಲಲು ಶ್ರೀಲಂಕಾ ನೀಡಿದ 292 ರನ್ ಗುರಿಯನ್ನು 37.1 ಓವರ್ಗಳಲ್ಲಿ ಮುಟ್ಟಬೇಕಾಗಿತ್ತು. ದಿಟ್ಟ ಹೋರಾಟ ನಡೆಸಿದ ಅಫ್ಘಾನಿಸ್ತಾನ ನ 37.4 ಓವರ್ಗಳಲ್ಲಿ 289 ರನ್ಗೆ ಆಲೌಟಾಗಿ ಗೆಲುವಿನ
ಹೊಸ್ತಿಲಲ್ಲಿ ಎಡವಿತು.
ಆಲ್ರೌಂಡರ್ ಮುಹಮ್ಮದ್ ನಬಿ (65 ರನ್, 32 ಎಸೆತ), ನಾಯಕ ಹಶ್ಮತುಲ್ಲಾ ಶಾಹಿದಿ(59 ರನ್, 66 ಎಸೆತ) ಹಾಗೂ ರಹಮತ್ ಶಾ(45 ರನ್, 40 ಎಸೆತ) ಅವರ ಹೋರಾಟ ವ್ಯರ್ಥವಾಯಿತು.
ಆಲ್ರೌಂಡರ್ ರಶೀದ್ ಖಾನ್ ಔಟಾಗದೆ 27 ರನ್ ಗಳಿಸಿದರು. ಕೇವಲ 24 ಎಸೆತಗಳಲ್ಲಿ 50 ರನ್(3 ಸಿಕ್ಸರ್, 6 ಬೌಂಡರಿ) ಪೂರೈಸಿದ ನಬಿ ವೇಗವಾಗಿ ಅರ್ಧಶತಕ ಸಿಡಿಸಿದರು.
ಶ್ರೀಲಂಕದ ಪರ ಕಸುನ್ ರಜಿತ(4-79)ಯಶಸ್ವಿ ಬೌಲರ್ ಎನಿಸಿಕೊಂಡರು. ಧನಂಜಯ ಡಿಸಿಲ್ವ(2-12) ಹಾಗೂ ಡುನಿತ್ ವೆಲ್ಲಲಗೆ(2-36)ತಲಾ ಎರಡು ವಿಕೆಟ್ಗಳನ್ನು ಪಡೆದರು. ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ಅಗ್ರ ಕ್ರಮಾಂಕದ ಆಟಗಾರ ಕುಶಾಲ್ ಮೆಂಡಿಸ್ ಅವರ 92 ರನ್(84 ಎಸೆತ, 6 ಬೌಂಡರಿ, 3 ಸಿಕ್ಸರ್) ನೆರವಿನಿಂದ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು. ಪಥುಮ್ ನಿಶಾಂಕ(41 ರನ್), ಚರಿತ್ ಅಸಲಂಕ(36 ರನ್), ಡುನಿತ್ ವೆಲ್ಲಲಗೆ(ಔಟಾಗದೆ 33), ಡಿ.ಕರುಣರತ್ನೆ(32 ರನ್)ಹಾಗೂ ಮಹೀಶ್ ತೀಕ್ಷಣ(28 ರನ್) ಎರಡಂಕೆಯ ಸ್ಕೋರ್ ಗಳಿಸಿದರು. ಅಫ್ಘಾನ್ ಪರ ಗುಲ್ಬದಿನ್ ನೈಬ್(4-60)ಹಾಗೂ ರಶೀದ್ ಖಾನ್ (2-63) ವಿಕೆಟ್ ಪಡೆದರು.