ಬೆಂಗಳೂರು: ದಾಖಲೆಯ ಮೊತ್ತ ಬೆನ್ನಟ್ಟಿದ ಆರ್ಸಿಬಿ ಹೋರಾಡಿ ಮಣಿಯಿತು. ಗೆಲುವಿಗೆ ಸಮೀಪದಲ್ಲಿ ಮುಗ್ಗರಿಸಿ 25 ರನ್ ಸೋಲೋಪ್ಪಿಕೊಂಡಿತು.ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 3 ವಿಕೆಟ್ ಕಳೆದುಕೊಂಡು 287 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು.ಗುರಿ ಬೆನ್ನಟ್ಟಿದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ ಬಾರಿಸಿತು. ಒಟ್ಟಿನಲ್ಲಿ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಹೊಳೆ ಹರಿಯಿತು. 40 ಓವರ್ಗಳಲ್ಲಿ 549 ರನ್ ಸಿಡಿಯಿತು. ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ನಾಯಕ ಪ್ಯಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಗೆಲುವಿಗಾಗಿ ಹೋರಾಟ ನಡೆಸಿದರೂ ಕೈಗೂಡಲಿಲ್ಲ. ದಿನೇಶ್ ಕಾರ್ತಿಕ್ ಕೇವಲ 35 ಎಸೆತಗಳಲ್ಲಿ 7 ಸಿಕ್ಸರ್ 5 ಬೌಂಡರಿ ನೆರವಿನಿಂದ 83 ರನ್ ಬಾರಿಸಿದರೆ, ಡುಪ್ಲೆಸಿಸ್ 28 ಎಸೆತಗಳಲ್ಲಿ 4 ಸಿಕ್ಸರ್, 7 ಬೌಂಡರಿ ನೆರವಿನಿಂದ 62 ರನ್, ವಿರಾಟ್ ಕೊಹ್ಲಿ 20 ಎಸೆತಗಳಲ್ಲಿ 2 ಸಿಕ್ಸರ್ 6 ಬೌಂಡರಿ ನೆರವಿನಿಂದ 42 ರನ್
ಬಾರಿಸಿದರು. ಈ ಮೂರು ಬ್ಯಾಟರ್ಗಳು ಕ್ರೀಡಾಂಗಣದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ ಸುರಿ ಮಳೆ ಸುರಿಸಿ ನೆರೆದ ಅಭಿಮಾನಿಗಳನ್ನು ರಂಜಿಸಿದರು. ಕೊಹ್ಲಿ-ಡುಪ್ಲೆಸಿಸಿ 6 ಓವರ್ಗಳಲ್ಲಿ 80 ರನ್ ಸಿಡಿಸಿ ಭರ್ಜರಿ ಆರಂಭ ಒದಗಿಸಿದರು. ಎಸ್ಆರ್ಎಚ್ ಪರ ನಾಯಕ ಪ್ಯಾಟ್ ಕಮಿನ್ಸ್ ಮೂರು ವಿಕೆಟ್ ಉರುಳಿಸಿದರು.
ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್
ಐಪಿಎಲ್ ಇತಿಹಾಸದಲ್ಲೇ ತಂಡವೊಂದು ಗಳಿಸಿದ ಅತ್ಯಧಿಕ ಮೊತ್ತ ಗಳಿಸಿತು. ಟ್ರಾವಿಸ್ ಹೆಡ್ 41 ಎಸೆತಗಳಲ್ಲಿ 102 ರನ್ ಸಿಡಿಸಿದರು. ಇವರ ಈ ಸ್ಫೋಟಕ ಆಟದಲ್ಲಿ 8 ಸಿಕ್ಸರ್ ಮತ್ತು 9 ಬೌಂಡರಿಗಳಿದ್ದವು. ಇವರಿಗೆ ಉತ್ತಮ ಸಾಥ್ ನೀಡಿದ ಕ್ಲಾಸೆನ್ 31 ಎಸೆತಗಳಲ್ಲಿ 7 ಸಿಕ್ಸರ್, 2 ಬೌಂಡರಿ ಸಹಿತ 67 ರನ್ ಗಳಿಸಿದರು.ಅಂತ್ಯದಲ್ಲಿ ಅಬ್ಬರಿಸಿದ ಏಡೆನ್ ಮರ್ಕರಂ(17 ಎಸೆತಗಳಲ್ಲಿ 32) ಮತ್ತು ಅಬ್ದುಲ್ ಸಮದ್(10 ಎಸೆತಗಳಲ್ಲಿ 37) ತಂಡವನ್ನು ಮತ್ತೊಂದು ದಾಖಲೆಯ ಗಡಿಗೆ ಸೇರಿಸಿದರು.