ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಅತೀ ದೊಡ್ಡ ಮೊತ್ತದ ರನ್ ಚೇಸ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯಗಳಿಸಿದೆ.ಪಂಜಾಬ್ ನೀಡಿದ 245 ರನ್ ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ 9 ಬಾಲ್ ಗಳು ಬಾಕಿಯಿರುವಂತೆ 2 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ 8 ವಿಕೆಟ್ಗಳ ಭರ್ಜರಿ ಜಯ ಗಳಿಸಿ ಜಯದ ಹಳಿಗೆ ಮರಳಿದೆ. ಅಭಿಷೇಕ್ ಶರ್ಮಾ ಸ್ಪೋಟಕ ಶತಕ ಸಿಡಿಸಿ ಗೆಲುವಿನ ರುವಾರಿಯಾದರು. ಕೇವಲ
55 ಎಸೆತ ಎದುರಿಸಿದ ಅಭಿಷೇಕ್ 14 ಬೌಂಡರಿ ಹಾಗೂ 10 ಸಿಕ್ಸರ್ 141 ರನ್ ಸಿಡಿಸಿದರು. ಅಭಿಷೇಕ್ ಶರ್ಮ ಹಾಗೂ ಟ್ರಾವಿಸ್ ಹೆಡ್ ಮೊದಲ ವಿಕೆಟ್ಗೆ 12.2 ಓವರ್ಗಳಲ್ಲಿ171 ರನ್ ಸೇರಿಸಿ ದಾಖಲೆ ಬರೆದರು. ಹೆಡ್ 37 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 66 ರನ್ ಗಳಿಸಿದರು. ಪಂಜಾಬ್ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದ ಅಭಿಷೇಕ್ ಹಾಗೂ ಹೆಡ್ ಬೌಂಡರಿ ಹಾಗೂ ಸಿಕ್ಸರ್ಗಳ ಸುರಿಮಳೆ ಸುರಿಸಿದರು.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ (82) ಸೇರಿದಂತೆ ಬ್ಯಾಟರ್ಗಳ ಸರ್ವಾಂಗೀಣ ಪ್ರದರ್ಶನದ ನೆರವನಿಂದ ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 245 ರನ್ಗಳ ಬೃಹತ್ ಮೊತ್ತ ಪೇರಿಸಿದೆ. ಓಪನರ್ಗಳಾದ ಪ್ರಿಯಾಂಶ್ ಮಆರ್ಯ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಬಿರುಸಿನ ಆರಂಭವೊದಗಿಸಿದರು.
ಇವರಿಬ್ಬರು ಮೊದಲ ವಿಕೆಟ್ಗೆ 4 ಓವರ್ಗಳಲ್ಲಿ 66 ರನ್ಗಳ ಜೊತೆಯಾಟ ಕಟ್ಟಿದರು.ಪ್ರಿಯಾಂಶ್ ಕೇವಲ 13 ಎಸೆತಗಳಲ್ಲಿ 36 ರನ್ ಗಳಿಸಿ (2 ಬೌಂಡರಿ, 4 ಸಿಕ್ಸರ್) ಅಬ್ಬರಿಸಿದರು. ಮತ್ತೊಂದೆಡೆ ಪ್ರಭ್ಸಿಮ್ರಾನ್ 23 ಎಸೆತಗಳಲ್ಲಿ 43 ರನ್ (7 ಬೌಂಡರಿ, 1 ಸಿಕ್ಸರ್) ಗಳಿಸಿದರು.ಬಳಿಕ ಕ್ರೀಸಿಗಿಳಿದ ಶ್ರೇಯಸ್ ಅಯ್ಯರ್, ನಾಯಕನ ಇನಿಂಗ್ಸ್ ಕಟ್ಟಿದರು. ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಅಯ್ಯರ್ ಕೇವಲ 36 ಎಸೆತಗಳಲ್ಲಿ ತಲಾ ಆರು ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ 82 ರನ್ ಗಳಿಸಿ ಅಬ್ಬರಿಸಿದರು.
ನಾಯಕನಿಗೆ ನೇಹಾಲ್ ವಧೇರಾ (27) ಉತ್ತಮ ಸಾಥ್ ನೀಡಿದರು. ಕೊನೆಯ ಹಂತದಲ್ಲಿ ಮಾರ್ಕಸ್ ಸ್ಟೋಯಿನಿಸ್ ಕೇವಲ 11 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ ಅಜೇಯ 34 ರನ್ ಸಿಡಿಸಿದರು. ಈ ಪೈಕಿ ಮೊಹಮ್ಮದ್ ಶಮಿ ಅವರ ಇನಿಂಗ್ಸ್ನ ಕೊನೆಯ ಓವರ್ನಲ್ಲಿ ಸತತ ನಾಲ್ಕು ಸಿಕ್ಸರ್ಗಳನ್ನು ಬಾರಿಸಿದರು.
ಇನ್ನುಳಿದಂತೆ ಶಶಾಂಕ್ ಸಿಂಗ್ (2) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (2) ವೈಫಲ್ಯ ಅನುಭವಿಸಿದರು.
ಹೈದರಾಬಾದ್ ಪರ ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಗಳಿಸಿದರು. ಮೊಹಮ್ಮದ್ ಶಮಿ ನಾಲ್ಕು ಓವರ್ಗಳಲ್ಲಿ 75 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದರು.