ಚಂಡೀಗಢ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಎರಡು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಪಂಜಾಬ್ ಕಿಂಗ್ಸ್ ತಂಡದ ಶಶಾಂಕ್ ಸಿಂಗ್ ಹಾಗೂ ಆಶುತೋಷ್ ಶರ್ಮಾ ಕೊನೆಯ ತನಕ ನಡೆಸಿದ ಹೋರಾಟ ವ್ಯರ್ಥವೆನಿಸಿತು.ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡವು
ಒಂಬತ್ತು ವಿಕೆಟ್ ನಷ್ಟಕ್ಕೆ 182 ರನ್ಗಳ ಸವಾಲಿನ ಮೊತ್ತ ಪೇರಿಸಿತ್ತು. ಗುರಿ ಬೆನ್ನಟ್ಟಿದ ಪಂಜಾಬ್ ಆರು ವಿಕೆಟ್ ನಷ್ಟಕ್ಕೆ 180 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಹೈದರಾಬಾದ್ನ ಎಡಗೈ ವೇಗಿ ಜೈದೇವ್ ಉನಾದ್ಕಟ್ ಅವರ ಕೊನೆಯ ಓವರ್ನಲ್ಲಿ ಪಂಜಾಬ್ ಗೆಲುವಿಗೆ 29 ರನ್ಗಳ ಅವಶ್ಯಕತೆಯಿತ್ತು. ದಿಟ್ಟ ಹೋರಾಟ ನೀಡಿದ ಆಶುತೋಷ್ ಹಾಗೂ ಶಶಾಂಕ್ ಮೂರು ಸಿಕ್ಸರ್ಗಳೊಂದಿಗೆ 26 ರನ್ ಗಳಿಸಿದರೂ ಸ್ವಲ್ಪದರಲ್ಲೇ ಪಂದ್ಯ ಕಳೆದುಕೊಳ್ಳಬೇಕಾಯಿತು. ಶಶಾಂಕ್ 25 ಎಸೆತಗಳಲ್ಲಿ ಅಜೇಯ 46 (6 ಬೌಂಡರಿ, 1 ಸಿಕ್ಸರ್) ಮತ್ತು ಆಶುತೋಷ್ 15 ಎಸೆತಗಳಲ್ಲಿ ಅಜೇಯ 33 (3 ಬೌಂಡರಿ, 2 ಸಿಕ್ಸರ್) ಗಳಿಸಿದರು. ಇವರಿಬ್ಬರು ಮುರಿಯದ ಏಳನೇ ವಿಕೆಟ್ಗೆ ಕೇವಲ 27 ಎಸೆತಗಳಲ್ಲಿ 66 ರನ್ಗಳ ಜೊತೆಯಾಟ ಕಟ್ಟಿದರು.ಇನ್ನುಳಿದಂತೆ ನಾಯಕ ಶಿಖರ್ ಧವನ್ (14), ಜಾನಿ ಬೆಸ್ಟೊ (0), ಪ್ರಭಸಿಮ್ರಾನ್ ಸಿಂಗ್ (4), ಸ್ಯಾಮ್ ಕರನ್ (29), ಸಿಕಂದರ್ ರಾಜಾ (28) ಹಾಗೂ ಜಿತೇಶ್ ಶರ್ಮಾ (19) ರನ್ ಗಳಿಸಿದರು.
ಈ ಮೊದಲು ಯುವ ಬ್ಯಾಟರ್ ನಿತೀಶ್ ರೆಡ್ಡಿ, ಬಿರುಸಿನ ಅರ್ಧಶತಕದ (64) ನೆರವಿನಿಂದ ಹೈದ್ರಾಬಾದ್ ಉತ್ತಮ ಮೊತ್ತ ಕಲೆ ಹಾಕಿತು. ಟ್ರಾವಿಸ್ ಹೆಡ್ (21), ಅಭಿಷೇಕ್ ಶರ್ಮಾ (16), ಏಡೆನ್ ಮಾರ್ಕರಮ್ (0), ರಾಹುಲ್ ತ್ರಿಪಾಠಿ (11) ಹಾಗೂ ಹೆನ್ರಿಚ್ ಕ್ಲಾಸೆನ್ (9) ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದರು.
ರೆಡ್ಡಿ 37 ಎಸೆತಗಳಲ್ಲಿ 64 ರನ್ ಗಳಿಸಿದರು. ಅವರ ಇನಿಂಗ್ಸ್ನಲ್ಲಿ ಐದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳು ಸೇರಿದ್ದವು. ಕೊನೆಯ ಹಂತದಲ್ಲಿ ಶಹಬಾಜ್ ಅಹ್ಮದ್ (14*) ಉಪಯುಕ್ತ ಕಾಣಿಕೆ ನೀಡಿದರು. ಪಂಜಾಬ್ ಪರ ಅರ್ಷದೀಪ್ ಸಿಂಗ್ ನಾಲ್ಕು ವಿಕೆಟ್ ಗಳಿಸಿದರು.