ಕೋಲ್ಕತ್ತ:ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 65 ರನ್ಗಳ ಜಯ ದಾಖಲಿಸಿತು.
ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 227 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಕೆಕೆಆರ್ 16 ಓವರ್ಗಳಲ್ಲಿ
161 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ತಂಡಕ್ಕೆ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಬಿರುಸಿನ ಆರಂಭವೊದಗಿಸಿದರು. ಅವರಿಬ್ಬರು ಮೊದಲ ವಿಕೆಟ್ಗೆ 5.4 ಓವರ್ಗಳಲ್ಲಿ 82 ರನ್ಗಳ ಜೊತೆಯಾಟ ಕಟ್ಟಿದರು. ಅಭಿಷೇಕ್ 21 ಎಸೆತಗಳಲ್ಲಿ 48 (4 ಸಿಕ್ಸರ್, 4 ಬೌಂಡರಿ) ಹಾಗೂ ಹೆಡ್ 21 ಎಸೆತಗಳಲ್ಲಿ 46 (6 ಬೌಂಡರಿ, 3 ಸಿಕ್ಸರ್) ರನ್ ಗಳಿಸಿದರು.
ನಾಯಕ ಇಶಾನ್ ಕಿಶನ್ 14 ರನ್ ಗಳಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಆಕರ್ಷಕ ಅರ್ಧಶತಕ ಗಳಿಸಿದ ಹೆನ್ರಿಚ್ ಕ್ಲಾಸೆನ್ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು. ಕ್ಲಾಸೆನ್ 35 ಎಸೆತಗಳಲ್ಲಿ 52 ರನ್ (4 ಬೌಂಡರಿ, 1 ಸಿಕ್ಸರ್) ಗಳಿಸಿದರು. ಕೊನೆಯಲ್ಲಿ ನಿತೀಶ್ ಕುಮಾರ್ ರೆಡ್ಡಿ 39 ರನ್ಗಳ (4 ಬೌಂಡರಿ, 1 ಸಿಕ್ಸರ್) ಉಪಯುಕ್ತ ಇನಿಂಗ್ಸ್ ಕಟ್ಟಿದರು. ಕೆಕೆಆರ್ ಪರ ಬ್ಲೆಸ್ಸಿಂಗ್ ಮುಝರಬಾನಿ ನಾಲ್ಕು ವಿಕೆಟ್ ಗಳಿಸಿದರು.
ಕೆಕೆಆರ್ಗೆ ಫಿನ್ ಅಲೆನ್ ಬಿರುಸಿನ ಆರಂಭವೊದಗಿಸಿದರು. ಡೇವಿಡ್ ಪೇಯ್ನ್ ಅವರ ಮೊದಲ ಓವರ್ನಲ್ಲೇ 24 ರನ್ ಸಿಡಿಸಿದರು. ಇದರಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ಗಳು ಸೇರಿದ್ದವು. ಏಳು ಎಸೆತಗಳಲ್ಲಿ 28 ರನ್ ಗಳಿಸಿ (4 ಬೌಂಡರಿ, 2 ಸಿಕ್ಸರ್) ಔಟ್ ಆದರು. 29 ಎಸೆತಗಳಲ್ಲಿ 52 ರನ್ (6 ಬೌಂಡರಿ, 2 ಸಿಕ್ಸರ್) ಗಳಿಸಿದ ಕೆಕೆಆರ್ ಬ್ಯಾಟರ್ ಅಂಗಕ್ರಿಷ್ ರಘುವಂಶಿ ಹೋರಾಟವು ವ್ಯರ್ಥವೆನಿಸಿತು. ರಿಂಕು ಸಿಂಗ್ (35) ಹೋರಾಟ ತೋರಿದರೂ ಗೆಲುವು ಸಾಧ್ಯವಾಗಲಿಲ್ಲ.









