ಸುಳ್ಯ: ಇಂದು ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಯಾಗಲಿದೆ. ಶ್ರಿರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಸಂಭ್ರಮ ದೇಶದಾದ್ಯಂತ ಮನೆ ಮಾಡಿದೆ. ಈ ಸಂಭ್ರಮ ಹೆಚ್ಚಿಸಲು ಚಿತ್ರ ಕಲಾವಿದೆ ಸುಳ್ಯ ಬೆಟ್ಟಂಪಾಡಿಯ ಪೂಜಾ ಬೋರ್ಕರ್ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಅಂಗಣದಲ್ಲಿ ಬಿಡಿಸಿದ ಸುಂದರ ಶ್ರೀರಾಮನ ರಂಗೋಲಿ ಗಮನ ಸೆಳೆದಿದೆ. 11 ಅಡಿ ಉದ್ದದ

ಬೃಹದಾಕಾರದ ಶ್ರೀರಾಮನ ಚಿತ್ರ ಮನ ಸೆಳೆಯುತಿದೆ. ಬಣ್ಣದ ಹುಡಿ ಬಳಸಿ ಸುಮಾರು ಎಂಟು ಗಂಟೆಗಳ ಕಾಲ ತೆಗೆದುಕೊಂಡು ಪೂಜಾ ಶ್ರೀರಾಮನ ರಂಗೋಲಿಯನ್ನು ಪೂರ್ತಿ ಮಾಡಿದ್ದಾರೆ. ಇಂದು ಚೆನ್ನಕೇಶವ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಚಿತ್ರ ವಿಶೇಷ ಆಕರ್ಷಣೆಯಾಗಲಿದೆ. ತನ್ನ ಕೈ ಚಳಕ ಮತ್ತು ಅಪಾರ ಭಾವನೆ ಮತ್ತು ಕಲಾ ಕೌಶಲ್ಯದಿಂದ
ಹಲವಾರು ವೈವಿಧ್ಯಮಯ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆದ ಪ್ರತಿಭಾನ್ವಿತೆ ಪೂಜಾ ಬೋರ್ಕರ್. ಹಲವಾರು ಖ್ಯಾತನಾಮರ ಚಿತ್ರಗಳನ್ನು ಬಿಡಿಸುವ ಪೂಜಾ ನೋಡ ನೋಡುತ್ತಿದ್ದಂತೆ ಕ್ಯಾನ್ವಾಸ್ನಲ್ಲಿ ಚಿತ್ರಗಳಿಗೆ ಜೀವ ತುಂಬುವ ಕಲಾವಿದೆ.













