ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು 3 ವಿಕೆಟ್ ಕಳೆದುಕೊಂಡು 287 ರನ್ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ಇದು ಐಪಿಎಲ್ ಇತಿಹಾಸದಲ್ಲೇ ತಂಡವೊಂದು ಗಳಿಸಿದ ಅತ್ಯಧಿಕ ಮೊತ್ತವಾಗಿದೆ. ಇದೇ ಆವೃತ್ತಿಯಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ
277 ರನ್ ಸಿಡಿಸಿ ದಾಖಲೆ ಬರೆದಿದ್ದ ಹೈದರಾಬಾದ್ ತಂಡ ಇಂದು 287 ರನ್ ಸಿಡಿಸುವ ಮೂಲಕ ತನ್ನ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡದ ಬ್ಯಾಟರ್ಗಳು ಅಕ್ಷರಶಃ ಬೆಂಗಳೂರು ಬೌಲರ್ಗಳನ್ನು ದಂಡಿಸಿದರು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ಗೆ ಮುಂದಾದ ಹೈದರಾಬಾದ್, ಯಾವುದೇ ಹಂತದಲ್ಲಿ ಬೆಂಗಳೂರು ಬೌಲರ್ಗಳು ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಟ್ರಾವಿಸ್ ಹೆಡ್
41 ಎಸೆತಗಳಲ್ಲಿ 102 ರನ್ ಸಿಡಿಸಿದರು. ಇವರ ಈ ಸ್ಫೋಟಕ ಆಟದಲ್ಲಿ 8 ಸಿಕ್ಸರ್ ಮತ್ತು 9 ಬೌಂಡರಿಗಳಿದ್ದವು. ಇವರಿಗೆ ಉತ್ತಮ ಸಾಥ್ ನೀಡಿದ ಕ್ಲಾಸೆನ್ 31 ಎಸೆತಗಳಲ್ಲಿ 7 ಸಿಕ್ಸರ್, 2 ಬೌಂಡರಿ ಸಹಿತ 67 ರನ್ ಗಳಿಸಿದರು.
ಅಂತ್ಯದಲ್ಲಿ ಅಬ್ಬರಿಸಿದ ಏಡೆನ್ ಮರ್ಕರಂ(17 ಎಸೆತಗಳಲ್ಲಿ 32) ಮತ್ತು ಅಬ್ದುಲ್ ಸಮದ್(10 ಎಸೆತಗಳಲ್ಲಿ 37) ತಂಡವನ್ನು ಮತ್ತೊಂದು ದಾಖಲೆಯ ಗಡಿಗೆ ಸೇರಿಸಿದರು.