ಚೆನ್ನೈ: ಜನಪ್ರಿಯ ಸಂಗೀತ ನಿರ್ದೇಶಕ ಎಸ್. ಪಿ. ವೆಂಕಟೇಶ್ (70) ಅವರು ಹೃದಯಾಘಾತದಿಂದ ಚೆನ್ನೈನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮಲಯಾಳಂನ ಹಲವು ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಮಲಯಾಳಂನ ಖ್ಯಾತ ನಟರಾದ ಮೋಹನ್ ಲಾಲ್ ಮತ್ತು ಮಮ್ಮುಟ್ಟಿಯಂತಹ ಹಿರಿಯ ನಟರೊಂದಿಗೆ ಕೆಲಸ ಮಾಡಿದ್ದಾರೆ. ಮೆಲೋಡಿ ಗೀತೆಗಳಿಗೆ
ಹೆಸರುವಾಸಿಯಾಗಿದ್ದರು.1955ರ ಮಾರ್ಚ್ 5ರಂದು ವೆಂಕಟೇಶ್ ಜನಿಸಿದರು. ಆರಂಭದಲ್ಲಿ ಸಂಗೀತ ನಿರ್ದೇಶಕ ವಿಜಯ್ ಭಾಸ್ಕರ್ ಅವರೊಂದಿಗೆ ಚಲನಚಿತ್ರಗಳಲ್ಲಿ ಗಿಟಾರ್ ನುಡಿಸುತ್ತಿದ್ದರು.ಬಳಿಕ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.1985ರಲ್ಲಿ ‘ಜಾನಕೀಯ ಕೊಡತಿ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸಿದರು. 1993ರಲ್ಲಿ ‘ಪೈತೃಕಂ’ ಮತ್ತು ‘ಜನಮ್’ ಚಿತ್ರಗಳಿಗೆ ‘ಅತ್ಯುತ್ತಮ ಸಂಗೀತ ನಿರ್ದೇಶಕ’ ಎಂಬ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕನ್ನಡದ ಸಿನಿಮಾಗಳಾದ ‘ಮೇಘವರ್ಷಿಣಿ’, ‘ನಿಮ್ಮ ಪ್ರೀತಿಯ ಹುಡುಗ’ ಮತ್ತು ‘ಅರಗಿಣಿ‘ಯಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.ವೆಂಕಟೇಶ್ ಅವರು ‘ಭೂಮಿಯಿಲೆ ರಾಜಕ್ಕನ್ಮಾರ್’, ‘ವಯಿಯೋರ ಕಾಯ್ಚಕಳ್’, ‘ಇಂದ್ರಜಾಲಂ’, ‘ನಾಡೋಡಿ’, ‘ಮಾಂತ್ರಿಕಂ’, ‘ಕಿಲುಕ್ಕಂ’, ‘ಮಿನ್ನಾರಂ’, ‘ಸ್ಫಡಿಕಂ’, ಮತ್ತು ‘ಜಾನಿ ವಾಕರ್’ ಚಿತ್ರಗಳಲ್ಲಿ ಜನಪ್ರಿಯ ಹಾಡುಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ 150ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.





