ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಫ್ಘಾನಿಸ್ತಾನ ವಿರುದ್ಧ 5 ವಿಕೆಟ್ ಜಯ ಸಾಧಿಸಿದೆ. ಈ ಮೂಲಕ ಸೆಮಿ ಫೈನಲ್ಗೆ ಗೇರುವ ಅಫ್ಘಾನಿಸ್ತಾನದ ಕನಸು ಭಗ್ನವಾಯಿತು. ಸೆಮಿ ಸಾಧ್ಯತೆ ಕಷ್ಟ ಸಾಧ್ಯವಾದ ಪಂದ್ಯದಲ್ಲಿ ಅಫ್ಘಾನಿಸ್ತಾನ ಆಫ್ರಿಕಾ ವಿರುದ್ಧ ಸೋಲುವುದರೊಂದಿಗೆ ಈ ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಿದೆ. ಆಕರ್ಷಕ ಗೆಲುವು ಹಾಗೂ ಅನಿರೀಕ್ಷಿತ ಸೋಲುಗಳ
ಮೂಲಕ ಸೆಮೀಸ್ ಸ್ಪರ್ಧಿಯಾಗಿದ್ದ ಅಫ್ಘಾನಿಸ್ತಾನ ಟೂರ್ನಿಯಲ್ಲಿ ಕೆಲವು ಪ್ರಮುಖ ತಂಡಗಳನ್ನು ಮಣಿಸುವ ಮೂಲಕ ಗಮನ ಸೆಳೆದಿತ್ತು. ಅಫ್ಘಾನ್ ತಂಡ ಹರಿಣಗಳ ವಿರುದ್ಧ 244 ರನ್ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಆಪ್ರಿಕಾ 47.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿ ಗುರಿ ಮುಟ್ಟಿತ್ತು. ಕ್ವಿಂಟನ್ ಡಿಕಾಕ್ 41 ರನ್ ನಾಯಕ ತೆಂಬ ಬವುಮ 23, ಐಡಮ್ ಮಾರ್ಕ್ರಮ್ 25 ರನ್ ಗಳಿಸಿದರೆ, ಹೆನ್ರಿ ಕ್ಲಾಸನ್ 10 ರನ್, ಡೇವಿಡ್ ಮಿಲ್ಲರ್ 24 ರನ್ ಗಳಿಸಿದರು. ವಾನ್ ಡೆರ್ ಡುಸ್ಸನ್ 6 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 76 ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.ಆಂಡಿಲೆ ಫೆಲುಕ್ವಾಯೋ 39 ರನ್ ಉಪಯುಕ್ತ ಕೊಡುಗೆ ನೀಡಿದ್ದರು.ಅಫ್ಘಾನಿಸ್ತಾನ ಪರ ಮುಹಮ್ಮದ್ ನಬಿ ಹಾಗೂ ರಶೀದ್ ಖಾನ್ ತಲಾ 2 ವಿಕೆಟ್ ಪಡೆದರು. ಮುಜೀಬ್ ಒಂದು ವಿಕೆಟ್ ಕಬಳಿಸಿದರು.









