ಸುಳ್ಯ: ಶೌರ್ಯ ಜಾಗರಣ ರಥ ಯಾತ್ರೆಯ ಮೂಲಕ ಹಿಂದೂ ಸಮಾಜ ಒಂದಾಗುವ ಮತ್ತು ತ್ರಿಖಂಡವಾದ ಭಾರತ ಮತ್ತೆ ಅಖಂಡವಾಗುವ ಸಂಕಲ್ಪವನ್ನು ಕೈಗೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು ಜಿ.ಸಕಲೇಶಪುರ ಹೇಳಿದ್ದಾರೆ. ವಿಶ್ವ ಹಿಂದೂ ಪರಿಷತ್ ಭಜರಂಗದಳದ ನೇತೃತ್ವದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಶೌರ್ಯ ಜಾಗರಣ ರಥಯಾತ್ರೆ 6ರಂದು ಸುಳ್ಯಕ್ಕೆ ಆಗಮಿಸಿದ ಸಂದರ್ಭ ನಡೆದ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸುಳ್ಯ ಪ್ರಖಂಡ ಹಾಗೂ
ಕಡಬ ಪ್ರಖಂಡದ ನೇತೃತ್ವದಲ್ಲಿ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಬೃಹತ್ ಹಿಂದೂ ಶೌರ್ಯ ಸಂಗಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಹಿಂದು ಸಂಘಟನೆಗಳ ಮೂಲಕ ಹಿಂದುಗಳ ಸಂಘಟಿಸುವ, ಒಗ್ಗೂಡಿಸುವ ಕೆಲಸ ನಡೆಯುತ್ತಿದೆ.ನಮ್ಮದು ಶ್ರೇಷ್ಠವಾದ ಶೌರ್ಯ ಪರಂಪರೆ. ಭಾರತದ ಇತಿಹಾಸವೇ ಶೌರ್ಯ ಇತಿಹಾಸ, ಭಾರತದ ಇತಿಹಾಸವೇ ಗೆಲುವಿನ ಇತಿಹಾಸ, ಭಾರತದ ಇತಿಹಾಸವೇ ಸಾಹಸದ ಇತಿಹಾಸ ಎಂದರು. ಶೌರ್ಯ ಜಾಗರಣ ರಥಯಾತ್ರೆ ಮೂಲಕ ಹಿಂದಿನ ಕಾರ್ಯ ನೆನಪಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮಲ್ಲಿರುವ ಸ್ವಾರ್ಥ ಬಿಟ್ಟು ಸಂಘಟನೆಯ ಹಿಂದೆ, ಸಂಘಟನೆಯ ಚೌಕಟ್ಟಿನಲ್ಲಿ ಹೋದರೆ ಮಾತ್ರ ಉಳಿಯಲು ಸಾಧ್ಯ ಎಂದರು.
ಸುಳ್ಯ ಶೌರ್ಯ ರಥಯಾತ್ರೆ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ದೇಶ ಇಂದು ಪರಮ ವೈಭವದ ಕಡೆಗೆ ಸಾಗುತ್ತಿದೆ. ಹಿರಿಯರ ಕಲ್ಪನೆಯಂತೆ ಹಿಂದೂ ಸಂಘಟನೆ ತನ್ನ ಕಾರ್ಯ ಚಟುವಟಿಕೆ ಮಾಡುತ್ತಿದೆ. ಮುಂದೆ ನಾವೆಲ್ಲ ಸೇರಿ ದೇಶ ಕಟ್ಟುವ ಕಾರ್ಯ ಮಾಡೋಣ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ವಿಶ್ವ ಹಿಂದೂ ಪರಿಷದ್ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಮುರಳೀಕೃಷ್ಣ ಹಸಂತಡ್ಕ, ಶೌರ್ಯ ರಥಯಾತ್ರೆ ಸಮಿತಿ ಸಂಚಾಲಕ ವೆಂಕಟ್ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿ ರಜತ್ ಅಡ್ಕಾರ್, ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ,
ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ,ವಿಹಿಂಪ ಸುಳ್ಯ ಪ್ರಖಂಡ ಕಾರ್ಯದರ್ಶಿ ನವೀನ್ ಎಲಿಮಲೆ, ನಗರ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ, ಕಡಬ ಪ್ರಖಂಡ ಕಾರ್ಯದರ್ಶಿ ಜಯಂತ್ ಕಲ್ಲುಗುಡ್ಡೆ, ಶೌರ್ಯ ರಥ ಯಾತ್ರೆಯ ಸಂಚಾಲಕರಾದ ರಜತ್ ಅಡ್ಕಾರ್, ಚೇತನ್ ಬೇರಿಕೆ, ಭಜರಂಗದಳ ಕಡಬ ತಾಲೂಕು ಸಂಚಾಲಕ ರಾಜೇಶ್ ಉದನೆ ಮತ್ತಿತರರು ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಳ್ಯ ಬಜರಂಗದಳ ಸಂಚಾಲಕ ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿದರು. ಸಂದೀಪ್ ವಳಲಂಬೆ ವಂದಿಸಿದರು. ಶ್ರೀದೇವಿ ನಾಗರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸೆ.25ರಂದು ಚಿತ್ರದುರ್ಗದಿಂದ ಹೊರಟ ರಥಯಾತ್ರೆಯು ಅ.10ರಂದು ಉಡುಪಿಯಲ್ಲಿ ಸಮಾಪನಗೊಳ್ಳಲಿದೆ. ಅ.6 ರಂದು ಸಂಜೆ ಸಂಪಾಜೆಯ ಮೂಲಕ ಸುಳ್ಯ ಪ್ರವೇಶಿಸಿತು. ರಥವನ್ನು ಸಂಪಾಜೆಯಲ್ಲಿ ಭವ್ಯವಾಗಿ ಸ್ವಾಗತಿಸಿ ವಾಹನ ಜಾಥಾದ ಮುಖಾಂತರ ಕರೆತಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಶೌರ್ಯ ಸಂಗಮ ಕಾರ್ಯಕ್ರಮ ನಡೆಯಿತು.