ಸುಳ್ಯ: ವಿಶ್ವ ಹಿಂದೂ ಪರಿಷತ್ ಭಜರಂಗದಳದ ನೇತೃತ್ವದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಶೌರ್ಯ ಜಾಗರಣ ರಥ ಯಾತ್ರೆ ಅ.6 ರಂದು ಸುಳ್ಯಕ್ಕೆ ಆಗಮಿಸಲಿದೆ. ಇದರ ಅಂಗವಾಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸುಳ್ಯ ಪ್ರಖಂಡ ಹಾಗೂ ಕಡಬ ಪ್ರಖಂಡದ ನೇತೃತ್ವದಲ್ಲಿ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಬೃಹತ್ ಹಿಂದೂ ಶೌರ್ಯ ಸಂಗಮ ನಡೆಯಲಿದೆ ಎಂದು ಶೌರ್ಯ ರಥಯಾತ್ರೆ ಸಮಿತಿಯ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಡಿದ ಅವರು 1964ರಲ್ಲಿ
ಜನ್ಮತಾಳಿದ ವಿಶ್ವ ಹಿಂದೂ ಪರಿಷತ್ 60 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಹಿಂದೂ ಧರ್ಮದ ವೈಭವಯುತ ಚರಿತ್ರೆ, ಸಂಸ್ಕೃತಿ, ಸಂಪ್ರದಾಯ ಇಡೀ ಸಮಾಜಕ್ಕೆ ತಿಳಿಸುವ ಉದ್ಧೇಶದಿಂದ,ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಮೇಲಿನ ಗೌರವವನ್ನು ಜಾಗೃತಗೊಳಿಸುವ ಉದ್ಧೇಶದಿಂದ ದೇಶದಾದ್ಯಂತ ಈ ರಥಯಾತ್ರೆ ನಡೆಯುತ್ತಿದೆ. ಸೆ.25ರಂದು ಚಿತ್ರದುರ್ಗದಿಂದ ಹೊರಟ ರಥಯಾತ್ರೆಯು ಅ.10ರಂದು ಉಡುಪಿಯಲ್ಲಿ ಸಮಾಪನಗೊಳ್ಳಲಿದೆ. ಅ.6 ರಂದು ಸಂಜೆ 5 ಗಂಟೆಗೆ ಸಂಪಾಜೆಯ ಮೂಲಕ ಸುಳ್ಯ
ಪ್ರವೇಶಿಸಲಿದೆ. ರಥವನ್ನು ಸಂಪಾಜೆಯಲ್ಲಿ ಭವ್ಯವಾಗಿ ಸ್ವಾಗತಿಸಿ ವಾಹನ ಜಾಥಾದ ಮುಖಾಂತರ ಕರೆತಂದು ಸಂಜೆ 5.30ಕ್ಕೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಶೌರ್ಯ ಸಂಗಮ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು ಜಿ. ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶೌರ್ಯ ರಥಯಾತ್ರೆ ಸಮಿತಿಯ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ,ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸಾದ್, ಮಂಗಳೂರು ವಿಭಾಗ ಸಂಯೋಜಕ ಭುಜಂಗ ಕುಲಾಲ್ ಉಪಸ್ಥಿತರಿರುವರು ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ ಮಾತನಾಡಿ ‘ಹಿಂದುತ್ವದ ಶೌರ್ಯದ ಪ್ರತೀಕವಾದ ಶೌರ್ಯ ರಥವನ್ನು ಬೃಹತ್ ಶೋಭಾಯಾತ್ರೆಯ ಮೂಲಕ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಭವ್ಯವಾಗಿ ಸ್ವಾಗತಿಸಲಾಗುವುದು. ಬಳಿಕ ನಡೆಯುವ ಬೃಹತ್ ಹಿಂದೂ ಶೌರ್ಯ ಸಂಗಮದಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶೌರ್ಯ ರಥಯಾತ್ರೆ ಸಮಿತಿ ಸಂಚಾಲಕ ವೆಂಕಟ್ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿ ರಜತ್ ಅಡ್ಕಾರ್, ಭಜರಂಗದಳದ ಸಂಚಾಲಕ ಹರಿಪ್ರಸಾದ್ ಎಲಿಮಲೆ, ವಿಶ್ವ ಹಿಂದೂ ಪರಿಷತ್ ನಗರ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ ಉಪಸ್ಥಿತರಿದ್ದರು.