ದೋಹಾ: ಕತಾರ್ ವಿಶ್ವಕಪ್ ಫುಟ್’ಬಾಲ್ ಟೂರ್ನಿಯ ಅಚ್ಚರಿ ಎಂಬಂತೆ ಬಲಿಷ್ಠ ಅರ್ಜೆಂಟೀನಾ ತಂಡವನ್ನು ಸೌದಿ ಅರೇಬಿಯಾ 2-1 ಗೋಲುಗಳ ಅಂತರದಲ್ಲಿ ಸೋಲಿಸಿದೆ. ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ
ಮೆಸ್ಸಿ ಪಡೆಯ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದ ಸೌದಿ ಅರೇಬಿಯಾ, ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು ದಾಖಲಿಸಿದೆ.ಪಂದ್ಯ ಆರಂಭವಾಗಿ 10ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ನಾಯಕ ಮೆಸ್ಸಿ, ಅರ್ಜೆಂಟೀನಾಗೆ ಆರಂಭದಲ್ಲೇ ಮುನ್ನಡೆ ಒದಗಿಸಿಕೊಟ್ಟಿದ್ದರು. ಆದರೆ ಆ ಬಳಿಕ 48ನೇ ನಿಮಿಷದಲ್ಲಿ ಅಲ್ ಸೆಹ್ರಿ ಮತ್ತು 53ನೇ ನಿಮಿಷದಲ್ಲಿ ಅಲ್ ದೌಸಾರಿ ಗಳಿಸಿದ ಗೋಲುಗಳ ಮೂಲಕ ಸೌದಿ ಅರೇಬಿಯಾ ಮುನ್ನಡೆ ಸಾಧಿಸಿತು. ಈ ಗೆಲುವಿನೊಂದಿಗೆ ಗ್ರೂಪ್ ಸಿಯಲ್ಲಿ ಸೌದಿ 3 ಅಂಕಗಳಿಸಿದೆ.