ಸುಳ್ಯ:ಸುಳ್ಯದ ಸ್ನೇಹ ಶಾಲೆಯಲ್ಲಿ ಸ್ನೇಹ ಆರೋಗ್ಯ ಕೇಂದ್ರ’ ಆರಂಭಗೊಂಡಿತು.ಡಾ. ಮುರಲೀಮೋಹನ್ ಚೂಂತಾರು ಉದ್ಘಾಟಿಸಿ ಮಾತನಾಡಿ ಶಾಲೆಗಳು ಇಂದು ವ್ಯಾಪಾರೀಕರಣ ಆಗುವ ಕಾಲಘಟ್ಟದಲ್ಲಿ ಗುರುಕುಲ ಪದ್ಧತಿಯಲ್ಲಿ ಶಿಕ್ಷಣದ ಪಾವಿತ್ರ್ಯತೆ ಕಾಪಾಡಿಕೊಂಡು , ಸಂಸ್ಕಾರ ನೀಡುವ ಶಾಲೆ ಸ್ನೇಹ ಶಾಲೆ. ಸಂಸ್ಕಾರಯುತ ಸ್ನೇಹ ಶಾಲೆಯಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ನೀಡುವ ದೇಶಸೇವೆ ಮಾಡುತ್ತಿರುವ ದಾಮ್ಲೆ ದಂಪತಿಗಳ ಶ್ರಮ ಶ್ಲಾಘನೀಯ. ಶಾಲೆಗಳಲ್ಲಿ ಪುಸ್ತಕದ ಕಲಿಕೆಗೆ
ಸೀಮಿತರಾಗದೆ ಬದುಕಿನ ಶಿಕ್ಷಣ ನೀಡಿದಾಗ ಮಗು ಯಶಸ್ಸಿನ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದರು. ರೋಗ ರಹಿತ, ಒತ್ತಡ ರಹಿತ ಜೀವನ ನಡೆಸಬೇಕು. ಕಲಿಕೆಗೆ ಮಾಧ್ಯಮ ಮುಖ್ಯವಲ್ಲ, ಸಾಧಿಸುವ ಛಲ ಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ. ವಿದ್ಯಾ ಶಾಂಭವ ಪಾರೆ ಮಾತನಾಡಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಹಾಗೂ ಡಾ. ರಂಗಯ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆರೋಗ್ಯ ಕೇಂದ್ರದ ವೈದ್ಯೆ ಡಾ. ಸುಶ್ಮಿತಾ ಎಂ. ಎಂ ಇವರು ಪ್ರಾಯೋಗಿಕ ಧ್ಯಾನದೊಂದಿಗೆ ಆರೋಗ್ಯದ ಜೀವನವನ್ನು ಹೇಗೆ ನಡೆಸಬೇಕೆಂದು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರದ ದಾಮ್ಲೆ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ವಂದಿಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮನಶ್ಶಾಸ್ತ್ರಜ್ಞ ಅಕ್ಷರ ದಾಮ್ಲೆ ಕಾರ್ಯಕ್ರಮ ನಿರೂಪಿಸಿದರು.ಸಮಾರಂಭದಲ್ಲಿ ಸುಳ್ಯದ ಸಾಧಕ ಡಾ. ಮುರಲೀಮೋಹನ್ ಚೂಂತಾರು ದಂಪತಿಗಳನ್ನು ಸನ್ಮಾನಿಸಲಾಯಿತು . ಮಕ್ಕಳ ತಜ್ಞ ಡಾ. ಶ್ರೀಕೃಷ್ಣ ಭಟ್, ಡಾ. ವಿದ್ಯಾಶಾರದ ಇನ್ನಿತರ ಗಣ್ಯರು, ಪೋಷಕರು ,ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.