ಶಿರೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶೀರೂರು ಗುಡ್ಡ ಕುಸಿದ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಭೇಟಿ ನೀಡಿದರು. ಮಣ್ಣು ತೆರವು, ಕಣ್ಮರೆಯಾದವರ ಪತ್ತೆ ಕಾರ್ಯಾಚರಣೆ ವೀಕ್ಷಿಸಿದರು.ಇಲ್ಲಿ ಗುಡ್ಡ ಕುಸಿತ ಸಂಭವಿಸಿದ ಸ್ಥಳದಲ್ಲಿ ಮಣ್ಣು ತೆರವು ಮತ್ತು ಕಣ್ಮರೆಯಾದವರ ಪತ್ತೆಗೆ ಉನ್ನತ ತಂತ್ರಜ್ಞಾನ ಮತ್ತು
ಹೆಚ್ಚುವರಿ ಯಂತ್ರಗಳ ಬಳಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.ಕಾರ್ಯಾಚರಣೆ ನಡೆಸುತ್ತಿರುವ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ತಂಡಗಳ ಜತೆ ಚರ್ಚೆ ನಡೆಸಿದರು.ಗುಡ್ಡ ಕುಸಿತದಲ್ಲಿ ಸಿಲುಕಿರಬಹುದಾದವರ ಪತ್ತೆಗೆ ನಡೆಯುವ ಕಾರ್ಯಾಚರಣೆ ಕುರಿತು ಮುಖ್ಯಮಂತ್ರಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕಂದಾಯ ಸಚಿವ ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಸತೀಶ್ ಸೈಲ್, ಭೀಮಣ್ಣ ನಾಯ್ಕ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಶಾಲಿನಿ ರಜನೀಶ್, ಇತರರು ಇದ್ದರು.
ಈ ಮಧ್ಯೆ ಗುಡ್ಡಕುಸಿತದಲ್ಲಿ ಸಿಲುಕಿರಬಹುದೆಂದು ಶಂಕಿಸಲಾಗಿರುವ ಕೇರಳದ ಕೋಝಿಕೋಡ್ನ ಟ್ರಾಕ್ ಡ್ರೈವರ್ ಅರ್ಜುನ್ ಹಾಗೂ ಇತರರ ಪತ್ತೆಗಾಗಿ ಕಾರ್ಯಾಚರಣೆ 6ನೇ ದಿನವೂ ಮುಂದುವರಿದಿದೆ. ಕಾರ್ಯಾಚರಣೆಗೆ ಇಂದು ಸೈನ್ಯವೂ ಇಂದು ಆಗಮಿಸಿದೆ. ನೇವಿ, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗುತಿದೆ. ಮಂಗಳೂರು-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಕೋಲ ಸಮೀಪ ಶಿರೂರಿನಲ್ಲಿ ಜು.16 ರಂದು ಸಂಭವಿಸಿದ ಗುಡ್ಡ ಕುಸಿತದಲ್ಲಿ 10 ಮಂದಿ ಸಿಲುಕಿದ್ದು ಇದರಲ್ಲಿ 7 ಮಂದಿಯ ಮೃತದೇಹ ದೊರೆತಿದೆ.3 ಮಂದಿ ಕಣ್ಮರೆಯಾಗಿದ್ದಾರೆ.















