ಸುಳ್ಯ:ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು ಇದರ ಭಾಗವಾಗಿ 2025ರ ಮತದಾರರ ಪಟ್ಟಿಯನ್ನು 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡುವ ಪ್ರಕ್ರಿಯೆ ನಡೆಯುತಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮ್ಯಾಪಿಂಗ್ ಪ್ರಕ್ರಿಯೆ ಶೇ.91.99 ಪೂರ್ತಿಯಾಗಿದೆ.ಮ್ಯಾಪಿಂಗ್ ಪ್ರಕ್ರಿಯೆ ಶೇ.100 ಪೂರ್ತಿ ಮಾಡುವ ಹಿನ್ನಲೆಯಲ್ಲಿ ಮತದಾರರ
ನೋಂದಣಾಧಿಕಾರಿ, ಜಿ.ಪಂ.ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ ಅವರ ಅಧ್ಯಕ್ಷತೆಯಲ್ಲಿ ಮ್ಯಾಪಿಂಗ್ ಪ್ರಕ್ರಿಯೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಈ ವಿಶೇಷ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮತಗಟ್ಟೆ ಅಧಿಕಾರಿಗಳು, ಮತಗಟ್ಟೆ ಮೇಲ್ವಿಚಾರಕರು ಭಾಗವಹಿಸಿದ್ದರು.
ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ, ಮ್ಯಾಪಿಂಗ್ ಕುರಿತು ಚರ್ಚೆ ನಡೆಯಿತು. ಮತದಾರರ ಪಟ್ಟಿಯ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಶೇ.91.99 ಪ್ರಗತಿ ಸಾಧಿಸಿದ್ದು ದ.ಕ. ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈ ತಿಂಗಳ ಕೊನೆಯ ವೇಳೆಗೆ ಮ್ಯಾಪಿಂಗ್ ಪ್ರಕ್ರಿಯೆ ಪೂರ್ತಿ ಮಾಡಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮತದಾರರ ನೋಂದಣಾಧಿಕಾರಿ ಜಯಲಕ್ಷ್ಮಿ ರಾಯಕೋಡ ಹೇಳಿದರು. ಪ್ರತಿ ಮತಗಟ್ಟೆಯ ಮ್ಯಾಪಿಂಗ್ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು. ಹಲವು ಮತಗಟ್ಟೆಗಳಲ್ಲಿ

ವಿಧಾನಸಭಾ ಮ್ಯಾಪಿಂಗ್ ಶೇಖಡಾಕ್ಕಿಂತ ಕಡಿಮೆ ಇದೆ. ವಿಧಾನಸಭಾ ಕ್ಷೇತ್ರದ 82 ಮತಗಟ್ಟೆಗಳಲ್ಲಿ ಮ್ಯಾಪಿಂಗ್ ಶೇ.70ಕ್ಕಿಂತ ಕಡಿಮೆ ಇದೆ.ಅದನ್ನು ಆದ್ಯತೆಯ ಮೇರೆಗೆ ಪೂರ್ತಿ ಮಾಡಬೇಕು. ಯಾವುದೇ ಅರ್ಹ ಮತದಾರರು ಮತದಾರ ಪಟ್ಟಿಯಿಂದ ಬಿಟ್ಟು ಹೋಗದಂತೆ ಎಚ್ಚರ ವಹಿಸಿ ಎಂದು ಅವರು ಸೂಚಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಜ, ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೇನಾಲ, ಪ್ರಮುಖರಾದ ಕೆ.ಗೋಕುಲ್ದಾಸ್, ಭವಾನಿಶಂಕರ ಕಲ್ಮಡ್ಕ, ಜಿನ್ನಪ್ಪ ಪೂಜಾರಿ, ರಶೀದ್ ಜಟ್ಟಿಪಳ್ಳ, ಡಿ.ಎಂ.ಶಾರಿಕ್ ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿದರು.
ರಾಜಕೀಯ ಮುಖಂಡರು ಹಾಗೂ ಬಿಎಲ್ಒಗಳು ಎತ್ತಿದ ಹಲವು ಪೃಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಿ ಮಾಹಿತಿ ನೀಡಿದರು.
ಸಹಾಯಕ ಮತದಾರರ ನೋಂದಣಾಧಿಕಾರಿ ತಹಶೀಲ್ದಾರ್ ಎಂ.ಮಂಜುಳ, ಚುನಾವಣಾ ಶಾಖೆಯ ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್, ಉಪಸ್ಥಿತರಿದ್ದರು.









