ಸುಬ್ರಹ್ಮಣ್ಯ: ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಅವರು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣ ಕಿದು ಸಿಪಿಸಿಆರ್ಐ ಕಾರ್ಯಕ್ರಮದಲ್ಲಿ ಭಾಗಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಲೋಕಸಭಾ ಚುನಾವಣೆಗೆ ತಾವು ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಅವರು ನಾನು ಸ್ಪರ್ಧೆ ಮಾಡುತ್ತೇನೆ ಎಂದು ನಗುತ್ತಾ ಉತ್ತರಿಸಿದರು. ರಾಜಕೀಯ ಎಂದರೆ ಅಸಮಾಧಾನಗಳು , ಗೆಲ್ಲುವ ಸೀಟನ್ನು
ಎಲ್ಲರೂ ಕೇಳುವುದು , ಸೀಟು ಕೇಳುವಾಗ ಗೊಂದಲಗಳು ಹಾಗೇ ಆಗುವುದು ಸಹಜ. ಕೇಂದ್ರದ ಚುನಾವಣಾ ಮಂಡಳಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.
ಅಡಿಕೆ ವಿದೇಶದಿಂದ ಆಮದು ಆಗುತ್ತಿದೆ ಎಂಬುದು ಗೊತ್ತಿಲ್ಲ. ವ್ಯಾಪರಸ್ಥರ ನಡುವೆ ಇರುವವರು ಅವರ ಲಾಭಕ್ಕೆ ಮಾಡುತ್ತಿರಬಹುದು. ಯಾಕೆಂದರೆ ಆಮದು ಆಗುತ್ತದೆ ಎಂದಾಗ ರೇಟ್ ಕುಸಿತ ಆಗುತ್ತದೆ ಅದೇ ಕಾರಣಕ್ಕೆ ಗೊಂದಲ ಸೃಷ್ಟಿಸುತ್ತಿರಬಹುದು ಎಂದರು
ಪ್ಯಾಸೆಂಜರ್ ರೈಲಿಗೆ ಕ್ರಮ;
ಮಂಗಳೂರು-ಸುಬ್ರಹ್ಮಣ್ಯ ನಡುವೆ ಬೆಳಗ್ಗೆ, ಸಂಜೆ ಪ್ಯಾಸೆಂಜರ್ ರೈಲು ಬೇಡಿಕೆ ಬಗ್ಗೆ ನಾನು ರೈಲು ಸಚಿವರ ಜೊತೆ ಮಾತನಾಡಿ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.
ರಾಜ್ಯದಲ್ಲಿ ಬಿಜೆಪಿ ಗೆಲುವು ನಿಶ್ಚಿತ;
ಲೋಕಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆ ಆಗಲಿದೆ. ಭಾರತೀಯ ಜನತಾ ಪಾರ್ಟಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಅದಕ್ಕೆ ಎಲ್ಲದಕ್ಕೂ ನಾವು ಬದ್ಧರಾಗಿದ್ದೇವೆ. ಕಳೆದ ೧೦ ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಡ ಮಟ್ಟದ ಅಭಿವೃದ್ಧಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ರೈಲು ವಿದ್ಯುದೀಕರಣ, ಅಮೃತ ಯೋಜನೆಯಡಿ ಸುಬ್ರಹ್ಮಣ್ಯ, ಉಡುಪಿ, ಚಿಕ್ಕಮಗಳೂರು ಭಾಗದ ರೈಲು ನಿಲ್ಧಾಣ ಆಯ್ಕೆಗೊಂಡು ಅಭಿವೃದ್ಧಿ ಆಗುತ್ತಿದೆ. ಸಿಆರ್ಎಫ್ನಲ್ಲಿ ರಸ್ತೆ ಬಂದಿದೆ, ಪಿಎಂಜೆಎಸ್, ಯಾವುದೇ ಹಳ್ಳಿಗಳಿಗೆ ತೆರಳಿದರೂ ಶೇ.೮೦-೯೦ ರಷ್ಟು ಜನರು ಕೇಂದ್ರದ ಬೇರೆ ಬೇರೆ ಯೋಜನೆಗಳನ್ನು ಪಡೆದುಕೊಂಡಿದ್ದಾರೆ. ಅಭಿವೃದ್ಧಿ ಆಧಾರದಲ್ಲಿಯೇ ಓಟು ಕೇಳಲಿದ್ದೇವೆ ಎಂದ ಅವರು ಕರ್ನಾಟಕದಲ್ಲಿ ಬಿಜೆಪಿ ಶೇ.೧೦೦ ರಷ್ಟು ಗೆಲವು ಸಾಧಿಸುವ ವಿಶ್ವಾಸ ಇದೆ. ನರೇಂದ್ರ ಮೋದಿ ಅವರು ಅಭಿವೃದ್ಧಿಗಾಗಿ ಇಲ್ಲಿಗೆ ಬಂದಿದ್ದಾರೆ. ಜನಕ್ಕೆ ಮೋದಿ ಬೇಕಿದೆ ಎಂದರು.
ಶಾಸಕಿ ಭಾಗೀರಥಿ ಮುರುಳ್ಯ ಜೊತೆಗಿದ್ದರು.









