ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಶುಕ್ರವಾರ ನಡೆಯುವ ಶಿವರಾತ್ರಿಗೆ ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಬರುವ ನಿರೀಕ್ಷೆ ಇದೆ.ಸುಮಾರು ಮೂವತ್ತು ಸಾವಿರ ಪಾದಯಾತ್ರಿಗಳು ಬರುವುದಾಗಿ ಪೂರ್ವಭಾವಿಯಾಗಿ ತಿಳಿಸಿದ್ದು ಹದಿನೈದು ಸಾವಿರ ಪಾದಯಾತ್ರಿಗಳು ಗುರುವಾರ ಧರ್ಮಸ್ಥಳ ತಲುಪಿದ್ದಾರೆ.
ಹತ್ತು ಸಾವಿರ ಮಂದಿ ಗುರುವಾರ ಸಂಜೆ ಉಜಿರೆ ತಲುಪಿದಾಗ ಇಲ್ಲಿನ
ಎಸ್.ಡಿ.ಎಂ. ಶಿಕ್ಷಣ ಸಂಸ್ಥಗಳಲ್ಲಿ ಅವರಿಗೆ ವಸತಿ ಸೌಲಭ್ಯ, ಶೌಚಾಲಯ, ಕುಡಿಯುವನೀರು, ಅಡುಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರು, ಮೈಸೂರು, ಶಿವಮೊಗ್ಗ ಮೊದಲಾದ ಕಡೆಯ ಪಾದಯಾತ್ರಿಗಳು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಹೆಸರಿನಲ್ಲಿ ಸಂಘ ರಚಿಸಿದ್ದು ಪ್ರತಿವರ್ಷ ಸಂಘದ ನೇತೃತ್ವದಲ್ಲಿ ಪಾದಯಾತ್ರೆಯಲ್ಲಿ ಬರುತ್ತಾರೆ. ಪಾದಯಾತ್ರಿಗಳು ಶ್ರದ್ಧಾ-ಭಕ್ತಿಯಿಂದ ಭಜನೆ ನಡೆಸಿದರು. ಭಾವಗೀತೆ, ಭಕ್ತಿಗೀತೆಗಳನ್ನು ಸಾಮೂಹಿಕವಾಗಿ ಎಲ್ಲರೂ ಸುಶ್ರಾವ್ಯವಾಗಿ ಹಾಡಿದರು. ಸ್ಥಲಿಯ ನಾಗರಿಕರು ಅವರಿಗೆ ಪಾನೀಯ, ಊಟ, ತಿಂಡಿ ವ್ಯವಸ್ಥೆಯನ್ನು ಉಚಿತವಾಗಿ ಮಾಡಿದರು.
ಧರ್ಮಸ್ಥಳದಲ್ಲಿ ಇಂದು ಜಾಗರಣೆ : ಶುಕ್ರವಾರ ಸಂಜೆ 6 ಗಂಟೆಗೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶಿವಪಂಚಾಕ್ಷರಿ ಪಠಣವನ್ನು ಉದ್ಘಾಟಿಸುವರು. ಉಪವಾಸ ಮತ್ತು ವ್ರತ, ನಿಯಮಗಳೊಂದಿಗೆ ಇಡೀ ರಾತ್ರಿ ಶಿವಪಂಚಾಕ್ಷರಿ ಪಠಣ, ಭಜನೆ, ದೇವರ ನಾಮಸ್ಮರಣೆ ನಡೆಯಲಿದೆ.
.














