ಸುಳ್ಯ:ತಿಂಡಿ ತಿನಿಸುಗಳಲ್ಲಿ ವೈವಿಧ್ಯತೆ ಸಾರಿದ ತಿಂಡಿ ಮೇಳವು ರುಚಿಯ ಹೊಸ ಅನುಭವವನ್ನು ಉಣ ಬಡಿಸಿತು.ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ವತಿಯಿಂದ ಕಾಂತಮಂಗಲದ ಪಯಸ್ವಿನಿ ತಟದ ಶ್ರೀ ಗುರು ರಾಘವೇಂದ್ರ ಮಠದಲ್ಲಿ ನಡೆದ ತಿಂಡಿ ಮೇಳವು ಪಾಕ ಲೋಕದ ಅದ್ಭುತ ಲೋಕವನ್ನು ತೆರೆದಿಟ್ಟಿತು.ಬಿಸಿ ಬಿಸಿ ತಿಂಡಿ ತಿನಿಸುಗಳು ನೆರೆದ ನೂರಾರು
ಮಂದಿಯ ಬಾಯಿಯನ್ನು ಸಿಹಿಯಾಗಿಸಿ ವೈವಿದ್ಯಮಯ ಖಾದ್ಯಗಳ
ರುಚಿಯ ವಿನೂತನ ಅನುಭವ ನೀಡಿತು. ಮಳೆಗಾಲದಲ್ಲಿ ಮನೆ
ಮನೆಗಳಲ್ಲಿ ಮಾಡುವ ವೈವಿಧ್ಯಮಯ ತಿಂಡಿಗಳ ರುಚಿಗಳು ಎಲ್ಲರ ಬಾಯನ್ನೂ ಸಿಹಿಯಾಗಿಸಿ ತಮ್ಮ ಅಡುಗೆಯ ನೈಪುಣ್ಯವನ್ನು ಎಲ್ಲರಿಗೂ ತಿಳಿಸಿಕೊಡಬೇಕು ಮತ್ತು ಕಲಿಸಿ ಕೊಡಬೇಕು ಎಂಬ ಉದ್ದೇಶದಿಂದ ತಿಂಡಿ ಮೇಳವನ್ನು ಏರ್ಪಡಿಸಲಾಗಿತ್ತು.ಶಿವಳ್ಳಿ ಸಂಪನ್ನವು ಪ್ರತಿ ವರ್ಷ ತಿಂಡಿ ಮೇಳವನ್ನು ಏರ್ಪಡಿಸುವುದರ ಮೂಲಕ ಸಾರ್ವಜನಿಕರ ಬಾಯಿಗೆ ರುಚಿಯ ವೈವಿಧ್ಯತೆಯನ್ನು ಸಾರುತ್ತಾರೆ.ಈ ಬಾರಿಯ ತಿಂಡಿ ಮೇಳದಲ್ಲಿ 16 ಕೌಂಟರ್ಗಳಲ್ಲಿ 30ಕ್ಕೂ ಹೆಚ್ಚು ವೈವಿಧ್ಯಮಯ ತಿಂಡಿಗಳನ್ನು ಪ್ರದರ್ಶಿಸಿ ವಿತರಿಸಲಾಯಿತು.

ಒಂದೊಂದು ಕೌಂಟರ್ನಲ್ಲಿಯೂ ಒಂದೊಂದು ಕುಟುಂಬದವರು ತಮ್ಮದೇ ಆದ ವಿಶೇಷ ತಿಂಡಿಗಳನ್ನು ಮಾಡಿ ಪ್ರದರ್ಶಿಸಿ ಉಣ ಬಡಿಸಿದರು.ಅದರ ತಯಾರಿಗೆ ಬಳಸುವ ವಸ್ತುಗಳು ಮತ್ತು ವಿಧಾನವನ್ನು ವಿವರಿಸಿ ಹೇಳುತ್ತಿದ್ದರು. ಪ್ರಾಕೃತಿಕವಾಗಿ ಸಿಗುವ ಫಲವಸ್ತುಗಳಾದ ಹಲಸು, ಬಾಳೆ ಹಣ್ಣು ಗಳಿಂದ ತಯಾರಿಸಿದ ವಿವಿಧ ಖಾದ್ಯಗಳು ಮೇಳದ ಹೈಲೈಟ್ ಆಗಿತ್ತು. ಹಲಸಿನ ಹಣ್ಣು ಮತ್ತು ಕಾಯಿಯಿಂದ ಮಾಡಲಾದ ತಿಂಡಿಗಳು, ಕರಿದ ತಿನಿಸುಗಳು ,ಬಾಯನ್ನು ಸಿಹಿಯಾಗಿಸಿತು.
ಚೂಡ, ನಿಪ್ಪಟ್ಟು, ಕಾಜಾ, ಕ್ಯಾರೆಟ್ ಹಲ್ವ, ಉಂಡ್ಲುಕ ಕಣಿಲೆ ಗಟ್ಟಿ, ಸೋಂಟೆ, ಆಲ್ ರೋಲ್, ಅವಲಕ್ಕಿ ಚೂಡ, ಮೈಸೂರು ಪಾಕ್, ಪತ್ರೋಡೆ, ರವಾ ಪ್ರೈ, ಮಿನಿ ಮಸಾಲ ದೋಸೆ, ರಾಗಿ ಬಾಲ್, ಪಾನಿಪುರ, ಕ್ಯಾರೆಟ್ ಕೀರ್, ಹಲಸಿನ ಬೀಜ ವಡೆ, ಬನಾನ ಚಿಪ್ಸ್, ಹಾರ್ಲಿಕ್ಸ್, ಕಾಫಿ, ಪತ್ರೋಡೆ ಬೆಂದಿ,ಮತ್ತಿತರರ ತಿಂಡಿ ತಿನಿಸುಗಳು ಜನರ ಬಾಯಿಯನ್ನು ಚಪ್ಪರಿಸುವಂತೆ ಮಾಡಿತ್ತು. ಒಂದೊಂದು ಕುಟುಂಬದವರೂ ಒಂದೊಂದು

ಕೌಂಟರ್ನಲ್ಲಿ ಬೇರೆ ಬೇರೆ ತರಹದ ತಿಂಡಿಗಳನ್ನು ಮಾಡಿ ತಮ್ಮ ಕೈಚಳಕವನ್ನು ತೋರ್ಪಡಿಸಿದರು. ತಿಂಡಿಯ ಹೆಸರನ್ನು ಮತ್ತು ತಯಾರಿಸಲು ಬಳಸುವ ವಸ್ತುಗಳ ಹೆಸರನ್ನು ಪ್ರದರ್ಶಿಸಲಾಗಿತ್ತು. ತಿಂಡಿ ಮೇಳದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಲಾಯಿತು. ಶಿವ ಸಂಪನ್ನದ ವತಿಯಿಂದ ಪ್ರತಿ ವರ್ಷವೂ ವೈವಿಧ್ಯಮಯ ತಿಂಡಿ ಮೇಳಗಳನ್ನು ಸಂಘಟಿಸಲಾಗುತ್ತದೆ.
ಹೋಟೆಲ್ ಉದ್ಯಮಿ ರಾಘವೇಂದ್ರ ಸರಳಾಯ ತಿಂಡಿಮೇಳ ಉದ್ಘಾಟಿಸಿದರು.
ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ಅಧ್ಯಕ್ಷ ರಾಮ್ ಕುಮಾರ್ ಹೆಬ್ಬಾರ್, ಕಾರ್ಯದರ್ಶಿ ನವೀನ ಸೋಮಯಾಗಿ, ಪ್ರಗತಿಪರ ಕೃಷಿಕ ರವಿಪ್ರಕಾಶ್ ಅಟ್ಲೂರು ಮತ್ತಿತರರು ಉಪಸ್ಥಿತರಿದ್ದರು.





