ಸುಳ್ಯ: ಮಹಿಳೆಯರಿಗೆ ಸರಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ನೀಡುವ ‘ಶಕ್ತಿ ಯೋಜನೆ’ ಸರಕಾರದ ಮಹತ್ವಾಕಾಂಕ್ಷಿ ಯೋಜನೆ.ರಾಜ್ಯದಾದ್ಯಂತ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸುಳ್ಯ ತಹಶಿಲ್ದಾರ್ ಜಿ.ಮಂಜುನಾಥ್ ಹೇಳಿದ್ದಾರೆ. ಸುಳ್ಯ ಬಸ್ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಮಹಿಳೆಯರಿಗೆ ಸರಕಾರಿ ಬಸ್ನಲ್ಲಿ ಉಚಿತ ಪ್ರಯಾಣ ನೀಡುವ ಶಕ್ತಿ
ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಬಳಿಕ ಬಸ್ನ ಮಹಿಳಾ ಪ್ರಯಾಣಿಕರಿಗೆ ಹೂವು ನೀಡಿ, ಟಿಕೆಟ್ ನೀಡಿ ಬಸ್ ಪ್ರಯಾಣ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ, ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ,
ನಗರ ಪಂಚಾಯತ್ನ ಕಾಂಗ್ರೆಸ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಎಸ್ಆರ್ಟಿಸಿ ಪುತ್ತೂರು ವಿಭಾಗದ ಸಹಾಯಕ ಆಡಳಿತಾಧಿಕಾರಿ ರೇವತಿ ಸ್ವಾಗತಿಸಿದರು. ಕೆಎಸ್ಆರ್ಟಿಸಿ ಪುತ್ತೂರು ವಿಭಾಗದ ಉಗ್ರಾಣಾಧಿಕಾರಿ ಮಂಜುನಾಥ ದೇವರಾಜ ಶೆಟ್ಟಿ ವಂದಿಸಿದರು. ಸುಳ್ಯ ಘಟಕದ ವ್ಯವಸ್ಥಾಪಕರಾದ ವಸಂತ ನಾಯ್ಕ್ ಉಪಸ್ಥಿತರಿದ್ದರು. ಪತ್ರಕರ್ತ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಪ್ರಯಾಣಿಕರಿಗೆ ಹೂಗುಚ್ಛ ನೀಡಲಾಯಿತು. ಸಿಹಿ ತಿಂಡಿ ನೀಡಿ ಪ್ರಯಾಣಕ್ಕೆ ಶುಭ ಕೋರಲಾಯಿತು.
ಅಂಗಾರರು ಶಾಸಕರಾದರೆ ಖಂಡಿತಾ ಬರುತ್ತಿದ್ದರು-ವೆಂಕಪ್ಪ ಗೌಡ:
ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸುಳ್ಯದ ಶಾಸಕರು ಬಾರದೇ ಇರುವುದು ವಿಷಾಧನೀಯ ಎಂದು ಸಮಾರಂಭದಲ್ಲಿ ಮಾತನಾಡಿದ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದರು. ಅಂಗಾರರು ಶಾಸಕರಾಗುತ್ತಿದ್ದರೆ ಸರಕಾರಿ ಕಾರ್ಯಕ್ರಮದಲ್ಲಿ ಖಂಡಿತಾ ಭಾಗವಹಿಸುತ್ತಿದ್ದರು. ಅಂಗಾರರು ಯಾವುದೇ ಸರಕಾರಿ ಕಾರ್ಯಕ್ರಮವನ್ನು ತಪ್ಪಿಸುತ್ತಿರಲಿಲ್ಲ ಮತ್ತು ಅವರು ಎಲ್ಲಾ ಸರಕಾರಿ ಕಾರ್ಯಕ್ರಮಕ್ಕೆ ಮೊದಲೇ ಆಗಮಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು ಎಂದು ವೆಂಕಪ್ಪ ಗೌಡ ಹೇಳಿದರು.