ಸುಳ್ಯ: ಅಧಿಕಾರ ವಹಿಸಿದ ಕೇವಲ ಒಂದು ತಿಂಗಳಲ್ಲಿ ಜನರಿಗೆ ನೀಡಿದ ಐದು ಗ್ಯಾರಂಟಿಗಳ ಪೈಕಿ ಮೂರು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿರುವುದು ಕರ್ನಾಟಕ ಸರಕಾರದ ಶ್ರೇಷ್ಠ ಸಾಧನೆ ಎಂದು ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ತಿಂಗಳು 11 ರಂದು
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಅನುಷ್ಠಾನ ಮಾಡಿದರೆ ಇಂದು ಗೃಹ ಜ್ಯೋತಿ ಹಾಗೂ ಅನ್ನ ಭಾಗ್ಯ ಯೋಜನೆ ಜಾರಿಯಾಗಿದೆ. ಈ ಮೂಲಕ ದೇಶದ ಯಾವುದೇ ರಾಜ್ಯಗಳು ಮಾಡದ ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಿದ ದೊಡ್ಡ ಸಾಧನೆಯನ್ನು ಸಿದ್ದರಾಮಯ್ಯ ಸರಕಾರ ಮಾಡಿದೆ ಎಂದು ಹೇಳಿದ ಅವರು ಯುವನಿಧಿ ಹಾಗೂ ಗೃಹ ಲಕ್ಷ್ಮಿ ಯೋಜನೆ ಮುಂದಿನ ತಿಂಗಳು ಜಾರಿಯಾಗಲಿದೆ ಎಂದರು. ಅನ್ನಭಾಗ್ಯ ಯೋಜನೆಗೆ ಅಕ್ಕಿ ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದರೂ ಕೇಂದ್ರ ಸರಕಾರ ಅಕ್ಕಿ ನೀಡಲಿಲ್ಲ. ಆದರೂ 5 ಕೆಜಿ ಅಕ್ಕಿ ಹಾಗೂ ಹೆಚ್ಚುವರಿ 5 ಕೆಜಿ ಅಕ್ಕಿಯ ಮೌಲ್ಯ 170 ರೂಗಳನ್ನು ಫಲಾನುಭವಿಯ ಖಾತೆಗೆ ನೀಡುವ ಮೂಲಕ ಸರಕಾರ ನುಡಿದಂತೆ ನಡೆದಿದೆ ಎಂದು ಟಿ.ಎಂ.ಶಹೀದ್ ಹೇಳಿದರು. ಒಂದೆಡೆ ಬಿಜೆಪಿಯ ಕೇಂದ್ರ ಸರಕಾರ ಅಕ್ಕಿ ನೀಡಲಿಲಗಲ, ಇನ್ನೊಂದೆಡೆ ಗ್ಯಾರಂಟಿ ಅನುಷ್ಠಾನ ಮಾಡದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿಯ ರಾಜ್ಯ ನಾಯಕರು ಹೇಳುತ್ತಿದ್ದಾರೆ. ಬಿಜೆಪಿ ಈ ದ್ವಂಧ್ವ ನಿಲುವನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮೂಸಾ ಕುಂಞಿ ಪೈಂಬೆಚ್ಚಾಲ್, ಸಿದ್ದಿಕ್ ಕೊಕ್ಕೊ, ಎನ್ಎಸ್ಯುಐ ಜಿಲ್ಲಾ ಕಾರ್ಯದರ್ಶಿ ಶಹಲ್ ಉಪಸ್ಥಿತರಿದ್ದರು.