ಕೋಲ್ಕತ್ತ: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಿಗು ಬೌಲಿಂಗ್ ದಾಳಿಗೆ ಕುಸಿದ ದಕ್ಷಿಣ ಆಫ್ರಿಕಾ 49.4 ಓವರ್ಗಳಲ್ಲಿ 212 ರನ್ಗಳಿಗೆ ಆಲ್ ಔಟ್ ಆಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾಕ್ಕೆ ಮೊದಲ ಓವರ್ನಲ್ಲಿಯೇ ಆಘಾತ ಎದುರಾಯಿತು. ನಾಯಕ ತೆಂಬಾ ಬವುಮಾ
ಶೂನ್ಯ ಸುತ್ತಿದರು. ಮಿಚ್ಚೆಲ್ ಸ್ಟಾರ್ಕ್ ಮತ್ತು ಜೋಸ್ ಹಝಲ್ವುಡ್ ದಾಳಿಗೆ ನಿರಂತರ ವಿಕೆಟ್ ಉರುಳಿ ಕೇವಲ 24 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆಫ್ರಿಕಾಕ್ಕೆ ಡೇವಿಡ್ ಮಿಲ್ಲರ್ ಏಕಾಂಗಿ ಹೋರಾಟದ ಮೂಲಕ ಬಲ ತುಂಬಿದರು. ಅಮೋಘ ಶತಕ ಸಿಡಿಸಿದ ಮಿಲ್ಲರ್ 116 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 101 ರನ್ ಗಳಿಸಿದರು. ಹೆನ್ರಿಚ್ ಕ್ಲಾಸೆನ್ 48 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 47 ರನ್ ಬಾರಿಸಿದರು. ಮಿಲ್ಲರ್ ಹಾಗೂ ಕ್ಲಾಸೆನ್ 5 ನೇ ವಿಕೆಟ್ಗೆ 95 ರನ್ ಜೊತೆಯಾಟ ಆಡಿ ಚೇತರಿಕೆ ನೀಡಿದರು. ಜೆರಾಲ್ಡ್ ಕೋಯ್ಸ್ಟಿ 19 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ತಲಾ 3 ವಿಕೆಟ್, ಹಝಲ್ವುಡ್ ಮತ್ತು ಟ್ರಾವಿಸ್ಹೆಡ್ ತಲಾ ಎರಡು ವಿಕೆಟ್ ಪಡೆದರು.
ಈ ಮಧ್ಯೆ ಮಳೆ ಬಂದು ಕೆಲ ಹೊತ್ತು ಆಟ ಸ್ಥಗಿತಗೊಂಡಿತು.









