ಮುಂಬೈ:ಐಸಿಸಿ ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ.ನ.15ರಂದು ಬುಧವಾರ ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈ ಮ್ಯಾಚ್ಗಾಗಿ ಟೀಮ್ ಇಂಡಿಯಾ ಪ್ಲೇಯರ್ಸ್ ಸೋಮವಾರ ಮುಂಬೈ ತಲುಪಿದ್ದಾರೆ.ಆಟಗಾರರು ಬೆಂಗಳೂರಿನಿಂದ ಸೋಮವಾರ ಸಂಜೆ ವೇಳೆಗೆ ಮುಂಬೈ ತಲುಪಿದರು. ತಂಡ ಇಂದು ಅಭ್ಯಾಸ ನಡೆಸಲಿದೆ. ನ್ಯೂಝಿಲೆಂಡ್ ಆಟಗಾರರು ಈಗಾಗಲೇ
ಮುಂಬೈ ತಲುಪಿದ್ದು ಸೋಮವಾರ ಅಭ್ಯಾಸ ನಡೆಸಿದರು. ಐಸಿಸಿ ಏಕದಿನ ವಿಶ್ವಕಪ್ 2023ರ ಲೀಗ್ ಪಂದ್ಯಗಳಲ್ಲಿ ಒಂದೇ ಒಂದು ಸೋಲಿಲ್ಲದೆ ಅದ್ಭುತವಾಗಿ ಮುಗಿಸಿರುವ ಭಾರತ ಕ್ರಿಕೆಟ್ ತಂಡ ಇದೀಗ ಸೆಮಿಫೈನಲ್ಗೆ ಸಜ್ಜಾಗುತ್ತಿದೆ. 9 ಪಂದ್ಯಗಳನ್ನು ಗೆದ್ದು 18 ಅಂಕಗಳೊಂದಿಗೆ ಅಗ್ರ ಸ್ಥಾನಿಯಾದ ಭಾರತ ನಾಲ್ಕನೇ ಸ್ಥಾನಿಯಾದ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಲೀಗ್ ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ಅಂತರದಲ್ಲಿ ನ್ಯೂಝಿಲೆಂಡ್ ತಂಡವನ್ನು ಮಣಿಸಿತ್ತು. 2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಝಿಲೆಂಡ್ ಭಾರತವನ್ನು ಪರಾಭವಗೊಳಿಸಿತ್ತು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2011ರ ವಿಶ್ವಕಪ್ ಫೈನಲ್ನಲ್ಲಿ ಗೆದ್ದು ಭಾರತ ವಿಶ್ವಕಪ್ ಎತ್ತಿತ್ತು. ಅದೇ ರೀತಿ ಇದೀಗ ವಾಂಖೆಡೆಯಲ್ಲಿ ಮತ್ತೊಂದು ಅಮೋಘ ಗೆಲುವನ್ನು ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಎರಡನೇ ಸೆಮಿಫೈನಲ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ನ.16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ನ.19ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ನಡೆಯಲಿದೆ.









