ಅಡಿಲೇಡ್: ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ಇನ್ನೀಂಗ್ಸ್ನಲ್ಲಿ 44.1 ಓವರ್ಗಳಲ್ಲಿ 180 ರನ್ಗಳಿಗೆ ಆಲ್ ಔಟ್ ಆಗಿದೆ. ಪಿಂಕ್ ಬಾಲ್ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಕೋರ್ ಬೋರ್ಡ್ಗೆ 100 ರನ್ ಸೇರಿಸುವ ಮೊದಲೇ ಭಾರತ ತಂಡದ
ಅಗ್ರ ಕ್ರಮಾಂಕ ಪೆವಿಲಿಯನ್ ಸೇರಿಕೊಂಡರು. ಟೀಂ ಇಂಡಿಯಾ ಕೇವಲ 18 ರನ್ಗಳ ಅಂತರದಲ್ಲಿ ರಾಹುಲ್, ವಿರಾಟ್, ಗಿಲ್ ಮತ್ತು ರೋಹಿತ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಭಾರತ ತಂಡದ ಬ್ಯಾಟಿಂಗ್ ಬೆನ್ನೇಲುಬು ಮುರಿಯುವಲ್ಲಿ ಆಸ್ಟ್ರೇಲಿಯದ ವೇಗಿಗಳು ಮಹತ್ವದ ಪಾತ್ರ ವಹಿಸಿದ್ದಾರೆ.
ಭಾರತದ ಪರ 42 ರನ್ ಗಳಿಸಿದ ನಿತೀಶ್ ಕುಮಾರ್ ರೆಡ್ಡಿ ಟಾಪ್ ಸ್ಕೋರರ್ ಆದರು. ಕೆ.ಎಲ್.ರಾಹುಲ್ 37, ಶುಭ್ಮನ್ ಗಿಲ್ 31, ಆರ್. ಅಶ್ವಿನ್ 22 ರಿಷಬ್ ಪಂತ್ 21 ರನ್ ಬಾರಿಸಿದರು. ಭಾರತ ತನ್ನ ಮೊದಲ 5 ವಿಕೆಟ್ಗಳನ್ನು ಕೇವಲ 87 ರನ್ಗಳಿಗೆ ಕಳೆದುಕೊಂಡಿತು. ಸ್ಕೋರ್ ಬೋರ್ಡ್ ತನ್ನ ಖಾತೆ ತೆರೆಯುವ ಮೊದಲೇ ಭಾರತ ಯಶಸ್ವಿ ಜೈಸ್ವಾಲ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಪಂದ್ಯದ ಮೊದಲ ಎಸೆತದಲ್ಲೇ ಜೈಸ್ವಾಲ್ ಔಟಾದರು. ಅವರ ವಿಕೆಟ್ನ ನಂತರ, ಕೆಎಲ್ ರಾಹುಲ್ ಮತ್ತು ಗಿಲ್ ನಡುವೆ ಎರಡನೇ ವಿಕೆಟ್ಗೆ 69 ರನ್ಗಳ ಜೊತೆಯಾಟ ನೀಡಿದರು.ಈ ಜೋಡಿಯ ವಿಕೆಟ್ ಪತನದ ನಂತರದ ಅಡಿಲೇಡ್ನಲ್ಲಿ ಭಾರತದ ಪೆವಿಲಿಯನ್ ಪರೇಡ್ ಆರಂಭವಾಯಿತು. ವಿರಾಟ್ ಕೊಹ್ಲಿ 7, ನಾಯಕ ರೋಹಿತ್ ಶರ್ಮ 3 ರನ್ ಬಾರಿಸಿದರು.
ಮಿಚೆಲ್ ಸ್ಟಾರ್ಕ್ , ಸ್ಕಾಟ್ ಬೋಲ್ಯಾಂಡ್, ಪ್ಯಾಟ್ ಕಮಿನ್ಸ್ ಭಾರತದ ಬ್ಯಾಟಿಂಬ್ ಬೆನ್ನೆಲುಬು ಮುರಿದರು. ಸ್ಟಾರ್ಕ್ 48 ರನ್ ನೀಡಿ 6 ವಿಕೆಟ್ ಪಡೆದರೆ,ಬೋಲ್ಯಾಂಡ್, ಪ್ಯಾಟ್ ಕಮಿನ್ಸ್ ತಲಾ ಎರಡು ವಿಕೆಟ್ ಉರುಳಿಸಿದರು.