ಸುಳ್ಯ:ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಪಾಲ ದಾಟುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ನೀರು ಪಾಲಾದ ವ್ಯಕ್ತಿಗಾಗಿ ಶುಕ್ರವಾರ ದಿನ ಪೂರ್ತಿ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ.
ಕಾಸರಗೋಡು ಜಿಲ್ಲೆಯ ಈಸ್ಟ್ ಎಳೇರಿ ಪಂಚಾಯತ್ನ ಚಿಟ್ಟಾರಿಕಾಲ್ ಸಮೀಪದ ಕಡುಮೇನಿಯ ನಾರಾಯಣನ್ (47) ಎಂಬವರು ನಾಪತ್ತೆಯಾಗಿದ್ದರು. ಶುಕ್ರವಾರ ಅಗ್ನಿಶಾಮಕ ದಳ, ಪೊಲೀಸ್, ಎಸ್ಡಿಆರ್ಎಫ್ ತಂಡ ಶೋಧ ನಡೆಸಿದರೂ
ಪತ್ತೆಯಾಗಲಿಲ್ಲ. ಅಗ್ನಿಶಾಮಕ ದಳ, ಪೊಲೀಸ್, ಎಸ್ಡಿಆರ್ಎಫ್ನ ಸುಮಾರು 20 ಮಂದಿಯ ತಂಡ ದಿನಪೂರ್ತಿ ಹುಡುಕಾಟ ನಡೆಸಿದ್ದರು.
ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಗುರುವಾರ ಸಂಜೆ ಘಟನೆ ಸಂಭವಿಸಿತ್ತು.ನಾರಾಯಣನ್ ಕೆಲವು ದಿನಗಳ ಹಿಂದೆ ಕೂರ್ನಡ್ಕ ಸಮೀಪ ತೋಟದ ಕೆಲಸಕ್ಕೆ ಬಂದಿದ್ದರು.
ಗುರುವಾರ ಸಂಜೆ ಪಾಲ ದಾಟುತ್ತಿದ್ದ ಸಂದರ್ಭ ನಾರಾಯಣನ್ ಅವರು ಆಯತಪ್ಪಿ ನೀರಿಗೆ ಬಿದ್ದು ನೀರುಪಾಲಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತೋಡಿನಲ್ಲಿ ನೀರು ಹೆಚ್ಚು ಹಾಗೂ ರಭಸವಾಗಿ ಹರಿಯುತ್ತಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್, ಸುಳ್ಯ ತಹಶೀಲ್ದಾರ್ ಮಂಜುನಾಥ್, ಸುಳ್ಯ ಎಸ್.ಐ ಈರಯ್ಯ ದೂಂತೂರು ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹುಡುಕಾಟವನ್ನು ಶನಿವಾರಕ್ಕೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.