ಮಂಗಳೂರು: ದ.ಕ.ಜಿಲ್ಲೆಯಲ್ಲಿ ಸುರಿಯುತ್ತಿರುವ ಸತತ ಮಳೆಯ ಹಿನ್ನೆಲೆಯಲ್ಲಿ ಮತ್ತು ಮುಂಜಾಗರೂಕತಾ ಕ್ರಮವಾಗಿ ಸ್ಥಳೀಯವಾಗಿ ಶಾಲಾ ಕಾಲೇಜುಗಳಿಗೆ ರಜೆಗಳನ್ನು ಘೋಷಿಸುವ ಅಧಿಕಾರವನ್ನು ಆಯಾ ತಾಲೂಕಿನ ತಹಶೀಲ್ದಾರರಿಗೆ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಮಾರ್ಗನಿರ್ದೇಶನ ನೀಡಿದ್ದಾರೆ. ಆಯಾ ಕ್ಷೇತ್ರದ
ಶಿಕ್ಷಣಾಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು, ಕಾಲೇಜಿನ ಪ್ರಾಂಶುಪಾಲರಿಂದ ವರದಿ ತಯಾರಿಸಿ ತಹಶೀಲ್ದಾರರಿಗೆ ಸಲ್ಲಿಸಬೇಕು. ತಹಶೀಲ್ದಾರರು ಪ್ರತಿದಿನ ಬೆಳಗ್ಗೆ 6ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ವೀಡಿಯೋ ಸಂವಾದ ನಡೆಸಿ ಹವಾಮಾನದ ಸ್ಥಿತಿಗತಿ ಅರಿತುಕೊಂಡು ರಜೆ ಘೋಷಿಸುವ ಬಗ್ಗೆ ಜಿಲ್ಲಾ ಮಟ್ಟದ ಸಮಿತಿಯ ಜೊತೆ ಚರ್ಚೆ ನಡೆಸಬೇಕು ಎಂದು ಡಿಸಿ ನಿರ್ದೇಶಿಸಿದ್ದಾರೆ.
ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾದಲ್ಲಿ ಸಣ್ಣ ತೊರೆಗಳು ಹಾಗೂ ತಗ್ಗು ಪ್ರದೇಶಗಳ ಕೂಡಲೇ ಜಲಾವೃತವಾಗುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಗರ ಪ್ರದೇಶದ ಶಾಲಾ ಕಾಲೇಜುಗಳಿಗೆ ಬರುವುದರಿಂದ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಹವಾಮಾನ ಮುನ್ಸೂಚನೆಯ ಸಂದರ್ಭದಲ್ಲಿ ನಿರಂತರವಾಗಿ ಮಳೆ ಬೀಳುತ್ತಿದ್ದಲ್ಲಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಬೇಕಾದ ಅನಿವಾರ್ಯತೆ ಕಂಡುಬಂದಲ್ಲಿ ವಿದ್ಯಾರ್ಥಿಗಳು ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಿಸುವ ಬಗ್ಗೆ ಆಯಾ ವ್ಯಾಪ್ತಿಯ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಯವರು, ಸ್ಥಳೀಯ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು/ ಪ್ರಾಂಶುಪಾಲರಿಂದ ವರದಿಯನ್ನು ಪಡೆದು ತಹಶೀಲ್ದಾರರುಗಳಿಗೆ ಸಲ್ಲಿಸ ತಕ್ಕದ್ದು ಸದ್ರಿ ವರದಿಯನ್ನು ಪರಿಶೀಲಿಸಿ ಶಾಲಾ ಕಾಲೇಜುಗಳಿಗೆ ರಜೆ
ಘೋಷಿಸುವ ಅಧಿಕಾರವನ್ನು ಆಯಾ ತಾಲೂಕು ತಹಶೀಲ್ದಾರರುಗಳಿಗೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನೀಡಿರುವ ಹವಾಮಾನ ಮುನ್ಸೂಚನೆಯನ್ನು ಪರಿಶೀಲನೆ ನಡೆಸುವುದು.ಹವಾಮಾನ ಮುನ್ಸೂಚನೆಯಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಮಳೆ ಪರಿಸ್ಥಿತಿ ಮತ್ತು ಇತರ ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲಾಡಳಿತದಿಂದಲೇ ರಜೆಯನ್ನು ಘೋಷಣೆ ಮಾಡಲಾಗುವುದು.
ಅರೆಂಜ್ ಮತ್ತು ಯೆಲ್ಲೋ ಅಲರ್ಟ್ನ ಮುನ್ಸೂಚನೆ ಇರುವಂತಹ ಸಂದರ್ಭ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾದಲ್ಲಿ ತಾಲೂಕುವಾರು ತಹಶೀಲ್ದಾರರು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಪ್ರತಿದಿನ ಬೆಳಿಗ್ಗೆ 06.00 ಗಂಟೆಗೆ ವೀಡಿಯೋ ಸಂವಾದ ನಡೆಸಿ ಸ್ಥಳೀಯ ಹವಾಮಾನ ಪರಿಸ್ಥಿತಿಗನುಗುಣವಾಗಿ ಅಗತ್ಯತೆ ಕಂಡು ಬಂದಲ್ಲಿ,
ರಜೆ ಘೋಷಣೆಯ ಕುರಿತಂತೆ ಮಾಹಿತಿ ಪಡೆದು ಜಿಲ್ಲಾಮಟ್ಟದ ಸಮಿತಿಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು. ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಸ್ತುವಾರಿ ವಹಿಸಿಕೊಂಡು ತೆಗೆದುಕೊಂಡ ಕ್ರಮದ ಬಗ್ಗೆ ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಗಳೂರು ಇವರಿಗೆ ಮಾಹಿತಿ ನೀಡುವುದು.ರಜೆ ಘೋಷಣೆಯ ಮಾಹಿತಿಯನ್ನು ತಕ್ಷಣವೇ ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸುವ ವ್ಯವಸ್ಥೆಯನ್ನು CRP ಮತ್ತು BRP ಹಾಗೂ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು/ ಪ್ರಾಂಶುಪಾಲರು ಮಾಡುವುದು, ಇದರ ಸಂಪೂರ್ಣ ಮೇಲ್ತುಸುವಾರಿಯನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಡಿಕೊಳ್ಳುವುದು. ಶಾಲಾ ಕಾಲೇಜು ಆಡಳಿತ ಮಂಡಳಿಯವರು/ಅಭಿವೃದ್ಧಿ ಸಮಿತಿಯವರು ಪ್ರಾಕೃತಿಕ ವಿಕೋಪ ನಿರ್ವಹಣೆಯ ಸೂಕ್ತ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳವುದು
ರಜೆ ಘೋಷಿಸಿದ ಬಗ್ಗೆ ಆದೇಶದ ಪ್ರತಿಯನ್ನು ಸದ್ರಿ ದಿನವೇ ಈ ಕಚೇರಿಗೆ ಒದಗಿಸಲು ಸೂಚಿಸಲಾಗಿದೆ.